ಕೊಪ್ಪಳ: ನಿಧಿ ಆಸೆಗಾಗಿ ಶಿವಲಿಂಗವನ್ನು ಕಿತ್ತು ಹಾಕಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ತಾಲೂಕಿನ ಶಿವಪುರ ಗ್ರಾಮದ ಬಳಿ ಇರುವ ಸೋಮನಾಥ ದೇವಾಲಯದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಿ ನಿಧಿ ಶೋಧಿಸಿದ್ದಾರೆ ಎನ್ನಲಾಗ್ತಿದೆ.
ಶಿವಪುರದ ಪಕ್ಕದ ಬೆಟ್ಟದಲ್ಲಿರುವ ಸೋಮನಾಥ ದೇವಾಲಯ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ. ಈ ಐತಿಹಾಸಿಕ ದೇವಸ್ಥಾನದಲ್ಲಿ ಶಿವಲಿಂಗ ಪ್ರತಿಷ್ಠಾನೆ ಮಾಡಿರುವ ಸ್ಥಳದ ಸುತ್ತ ಕಬ್ಬಿಣದ ಸಲಾಕೆಗಳಿಂದ ಅಗೆಯಲಾಗಿದೆ. ಇದರಿಂದ ಅಲ್ಲಿದ್ದ ಶಿವಲಿಂಗ ಮೂರ್ತಿ ಭಗ್ನವಾಗಿದೆ. ನಂತರ ಕಬ್ಬಿಣದ ಸಲಕರಣೆಗಳನ್ನು ಅಲ್ಲಿಯೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.