ಕೊಪ್ಪಳ :ಕೊರೊನಾ ಅನ್‌ಲಾಕ್ 4.0ರಲ್ಲಿ ಸಿನಿಮಾ ಮಂದಿರಗಳನ್ನು ಇಂದಿನಿಂದ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಸಹ ಜಿಲ್ಲೆಯಲ್ಲಿ ಇಂದು ಬಹುತೇಕ ಯಾವ ಚಿತ್ರಮಂದಿರಗಳು ಆರಂಭವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 23 ಚಿತ್ರಮಂದಿರಗಳಿವೆ. ಶುಕ್ರವಾರದಿಂದ ಚಿತ್ರಮಂದಿರ ಓಪನ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಚಿತ್ರಮಂದಿರಗಳನ್ನು ಶೇ.50ರಷ್ಟು ಪ್ರೇಕ್ಷಕರೊಂದಿಗೆ ಆರಂಭ ಮಾಡಬಹುದು ಎಂದು ಸರ್ಕಾರ ಸೂಚನೆ ನೀಡಿದೆ. ಆದರೆ, ಶೇ.100ರಷ್ಟು ಪ್ರೇಕ್ಷಕರು ಇದ್ದರೆ ಅನುಕೂಲವಾಗುತ್ತದೆ ಎಂದು ಚಿತ್ರಮಂದಿರಗಳ ಮಾಲೀಕರು ಹೇಳುತ್ತಿದ್ದಾರೆ.
ಆದರೂ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದರಿಂದ ಜಿಲ್ಲೆಯಲ್ಲಿ ಶುಕ್ರವಾರದ ವೇಳೆಗೆ ಒಂದೊಂದಾಗಿ ಚಿತ್ರಮಂದಿರಗಳು ಆರಂಭವಾಗಬಹುದು.
ಚಿತ್ರಗಳ ಹಂಚಿಕೆದಾರರು, ವಿತರಕರಿಂದ ಚಿತ್ರಮಂದಿಗಳ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಅನುಮತಿ ಪಡೆದುಕೊಳ್ಳುವುದು ಸೇರಿದಂತೆ ಚಿತ್ರ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.
ಈಗ ಸದ್ಯಕ್ಕೆ ಯಾವ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಹಳೆಯ ಚಿತ್ರಗಳಿಗೆ ಪ್ರೇಕ್ಷಕರು ಬರುವುದಿಲ್ಲ. ಹೀಗಾಗಿ, ಶುಕ್ರವಾರದ ವೇಳೆಗೆ ಜಿಲ್ಲೆಯಲ್ಲಿ ಒಂದೊಂದಾಗಿ ಚಿತ್ರ ಮಂದಿರಗಳು ಆರಂಭವಾಗಬಹುದು ಎನ್ನುತ್ತಾರೆ ಕೊಪ್ಪಳದ ಲಕ್ಷ್ಮಿ ಮತ್ತು ಶಿವ ಚಿತ್ರ ಮಂದಿರಗಳ ಮಾಲೀಕರಾದ ವಿಶ್ವನಾಥ ಮಹಾಂತಯ್ಯನಮಠ.