ಗಂಗಾವತಿ:ವಿಶ್ವವಿಖ್ಯಾತವಾಗಿರುವ ನಾಡ ಹಬ್ಬ ದಸರಾದ ಮೂಲ ವಿಜಯನಗರದಲ್ಲೂ ಆಚರಣೆಯಾಗಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ಹೇಳಿದರು.
ವಿಶ್ವ ವಿಖ್ಯಾತ ದಸರಾ ವಿಜಯನಗರದಲ್ಲೂ ಆಚರಿಸಬೇಕು... ಚಿದಾನಂದ ಮೂರ್ತಿ ಆಗ್ರಹ - ಸಂಶೋಧಕ ಚಿದಾನಂದ ಮೂರ್ತಿ
ವಿಶ್ವವಿಖ್ಯಾತವಾಗಿರುವ ನಾಡ ಹಬ್ಬ ದಸರಾದ ಮೂಲ ವಿಜಯನಗರ ಸಾಮ್ರಾಜ್ಯ. ಅಲ್ಲಿಯೂ ಈ ಹಬ್ಬ ಆಚರಣೆಯಾಗಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ ಒತ್ತಾಯಿಸಿದ್ದಾರೆ.
ತಾಲೂಕಿನ ಕುಮ್ಮಟದುರ್ಗಕ್ಕೆ ಭೇಟಿ ನೀಡುವ ಉದ್ದೇಶಕ್ಕೆ ಆಗಮಿಸಿದ್ದ ಅವರು ನಗರದಲ್ಲಿ ಸಾಹಿತಿ, ಇತಿಹಾಸಕಾರರು ಹಾಗೂ ಸಮಾನ ಮನಸ್ಕರೊಂದಿಗೆ ಮಾತನಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ದಸರಾದ ಮಾದರಿಯಲ್ಲಿ ವಿಜಯನಗರದಲ್ಲೂ ದಸರಾ ಆಚರಣೆಯಾಗಬೇಕು. ಇದು ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಆದರೆ, ಅದರ ಮೂಲ ಸ್ಥಾನವಾಗಿರುವ ವಿಜಯನಗರದಲ್ಲಿ ದಸರಾ ಆಚರಣೆಗೆ ಚಾಲನೆ ಸಿಗಬೇಕಿದೆ ಎಂದು ಪ್ರತಿಪಾದಿಸಿದರು. ಈ ಮೂಲಕ ದಸರಾ ಹಬ್ಬಕ್ಕೆ ತಾತ್ವಿಕ ನೆಲೆಗಟ್ಟು ಕಟ್ಟಿಕೊಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಇತಿಹಾಸಕಾರರು, ಸಂಶೋಧಕರು, ಸಾಹಿತಿಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಬೇಕು. ಅದರ ಪ್ರತಿ ನನಗೂ ಕೊಟ್ಟರೆ ನೇರವಾಗಿ ಸಿಎಂ ಬಳಿ ವಿಷಯ ಪ್ರಸ್ತಾಪಿಸಿ ವಿಜಯನಗರದಲ್ಲಿ ದಸರಾ ಆಚರಣೆಗೆ ಒತ್ತಾಯಿಸಲಾಗುವುದು ಎಂದರು.