ಕುಷ್ಟಗಿ(ಕೊಪ್ಪಳ): ತಾಲೂಕಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಭದ್ರತೆ ಯೋಜನೆಗಾಗಿ, ಸಾಮಾಜಿಕ ಅಂತರ ಕಾಪಾಡದಿರುವುದು ಆತಂಕ ತಂದೊಡ್ಡಿದೆ.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರದಿಂದ ಸಾರ್ವಜನಿಕರ ಅನಗತ್ಯ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಕಚೇರಿ ಆವರಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ದಾಖಲೀಕರಣಕ್ಕಾಗಿ ಆಧಾರ್ ಸೀಡಿಂಗ್ಗೆ ಯಾವೂದೇ ಅಗತ್ಯ ಕ್ರಮಕ್ಕೆ ತಾಲೂಕಾಡಳಿತ ಮುಂಜಾಗ್ರತೆ ವಹಿಸಿಲ್ಲ ಎನ್ನಲಾಗಿದೆ.
ಸಾಮಾಜಿಕ ಅಂತರ ಮರೆತ ಹಿರಿಯ ಜೀವಗಳು ಜೀವನ ನಿರ್ವಹಣೆಗೆ ಆಧಾರವಾಗಿದ್ದ ಮಾಸಾಶನ ಸ್ಥಗಿತವಾದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಕೊರೊನಾ ಭಯ ಲೆಕ್ಕಿಸದೇ ತಹಶೀಲ್ದಾರ್ ಕಚೇರಿಗೆ ಬರುತ್ತಿದ್ದಾರೆ. ಮಹಾಮಾರಿ ಕೊರೊನಾ ಸಂಬಂಧ ಸರ್ಕಾರ ಹಿರಿಯರನ್ನು ಹೊರಗೆ ಕಳುಹಿಸಬೇಡಿ ಎಂದು ಹೇಳುತ್ತಿದ್ದರೂ ಈ ಹಿರಿಯ ಜೀವಗಳು ಕೊರೊನಾ ಭಯದ ನಡುವೆಯೂ ಜೀವನ ನಿರ್ವಹಣೆಗೆ ಮಾಸಾಶನಕ್ಕಾಗಿ ಹೊರ ಬರುವಂತಾಗಿದೆ.
ಆಧಾರ್ ಜೋಡಣೆಯ ಖಾತೆ ವಿವರ ನೀಡಿದಾಗ್ಯೂ ಮಾಸಾಶನ ಪಾವತಿಯಾಗುತ್ತಿಲ್ಲ. ಮಾಸಾಶನ ಬರುತ್ತಿಲ್ಲ ಎಂಬ ಕಾರಣಕ್ಕೆ ಕುಟುಂಬ ಸದಸ್ಯರ ನಿರ್ಲಕ್ಷ್ಯಕ್ಕೆ ಗುರಿಯಾಗುವುದನ್ನು ತಪ್ಪಿಸಲು ನೂರಕ್ಕೂ ಅಧಿಕ ಜನರು ತಹಶೀಲ್ದಾರ್ ಕಚೇರಿಗೆ ಬರುವುದನ್ನು ತಪ್ಪಿಸಲು ಅಗತ್ಯ ಪೂರಕ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.