ಗಂಗಾವತಿ:ಆಂತರಿಕ ಭದ್ರತೆ ಹೆಚ್ಚಿಸುವ ಮತ್ತು ಸುರಕ್ಷತೆ ಹಿತದೃಷ್ಟಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ಜಿಲ್ಲಾ ಪೊಲೀಸರು ಪ್ರವಾಸಿ ತಾಣ, ವಿದೇಶಿಗರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ನಿಗಾ ಇಡಲು ಮುಂದಾಗಿದ್ದಾರೆ.
ಇದರ ಭಾಗವಾಗಿ ವಿದೇಶಿಗರ ನೆಚ್ಚಿನತಾಣ ಮತ್ತು ಪ್ರವಾಸೋದ್ಯಮದ ಕೇಂದ್ರವಾದ ವಿರುಪಾಪುರ ಗಡ್ಡೆಯಲ್ಲಿನ ಚಟುವಟಿಕೆಗಳ ಮೇಲೆ ನಿಗಾವಹಿಸಲು ಪೊಲೀಸ್ ಇಲಾಖೆ ಇದೀಗ ಸಿಸಿ ಕ್ಯಾಮರ ಹದ್ದಿನ ಕಣ್ಣಿಡಲು ಮುಂದಾಗಿದೆ. ಗಂಗಾವತಿ ಗ್ರಾಮೀಣ ಠಾಣೆಗೆ ಒಳಪಡುವ ಈ ಪ್ರದೇಶದಲ್ಲಿ ವಿದೇಶಿಗರ ಚಲನ-ವಲನ, ಸ್ಥಳೀಯ ಪ್ರವಾಸಿಗರ ಓಡಾಟದಂತ ಚಟುವಟಿಕೆಗಳ ಮೇಲೆ ಪೊಲೀಸರು ಕಣ್ಣಿಡಲಿದ್ದಾರೆ.
ಕೊಪ್ಪಳ ಜಿಲ್ಲಾ ಪೊಲೀಸರು ಪ್ರವಾಸಿ ತಾಣ, ವಿದೇಶಿಗರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ನಿಗಾ ಇಡಲು ಮುಂದಾಗಿದ್ದಾರೆ. ಮುಖ್ಯವಾಗಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ವಿರುಪಾಪುರ ಗಡ್ಡೆಯಲ್ಲಿ ಎರಡು ಕಡೆ ಸಿಸಿ ಕ್ಯಾಮರ ಹಾಕಲಾಗಿದೆ. ಗಂಗಾವತಿಯಿಂದ ಸಣಾಪುರ ಹೋಗುವ ಮಾರ್ಗದಲ್ಲಿ ಕಲ್ಲಿನ ಸೇತುವೆ ಮೂಲಕ ವಿರುಪಾಪುರ ಗಡ್ಡೆಗೆ ರಸ್ತೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಒಂದು ಮತ್ತು ಗಡ್ಡೆಯಿಂದ ಹೊರಕ್ಕೆ ಹೋಗುವ ರಸ್ತೆಯಲ್ಲಿ ಮತ್ತೊಂದು ಕ್ಯಾಮರ ಇಡಲಾಗಿದೆ.
ಗಡಿ ಭಾಗದಲ್ಲಿ ನಡೆಯುವ ಅಹಿತಕರ ಘಟನೆ, ಅಪಘಾತ, ಕಾನೂನು ಬಾಹಿರ ಕೃತ್ಯ ಮುಖ್ಯವಾಗಿ ವಿದೇಶಿಗರ ಚಲನೆಗಳ ಮೇಲೆ ನಿಗಾ ಇಡುವ ಉದ್ದೇಶಕ್ಕೆ ಕ್ಯಾಮರ ಅಳವಡಿಸಲಾಗಿದೆ. ಎಲ್ಲಾ ರೀತಿಯಿಂದಲೂ ಸುರಕ್ಷತೆಗಾಗಿ ತಾಂತ್ರಿಕತೆ ಬಳಸಿಕೊಳ್ಳಲಾಗುತ್ತಿದೆ' ಎಂದು ಗ್ರಾಮೀಣ ವೃತ್ತದ ಸಿಪಿಐ ಸುರೇಶ ತಳವಾರ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿನ ಇತ್ತೀಚಿನ ವಿದ್ಯಮಾನ, ದೇಶಕ್ಕೆ ಕಾಡುತ್ತಿರುವ ಉಗ್ರರ ಭೀತಿ ಹಾಗೂ ಪಾಕಿಸ್ತಾನ ನಿರಂತರವಾಗಿ ಭಾರತದ ವಿರುದ್ಧ ನೀಡುತ್ತಿರುವ ಯುದ್ಧೋತ್ಸಾಹದ ಹೇಳಿಕೆಗಳಿಂದಾಗಿ ಆಂತರಿಕ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.