ಕೊಪ್ಪಳ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮೂಲಕ ಜನರಿಗೆ ನೆರವಾಗಿದೆ. ಅದರಲ್ಲೂ ಈ ವರ್ಷ ಕೋವಿಡ್ ಭೀತಿಯಿಂದ ಸಂಕಷ್ಟಕ್ಕೊಳಗಾಗಿದ್ದ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ನೀಡಿ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದೆ.
ಕೋವಿಡ್ನಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಈ ಯೋಜನೆ ವರದಾನವಾಗಿದೆ. ಕೆಲಸ ಕೇಳಿದ ವಲಸೆ ಕಾರ್ಮಿಕರು, ಖಾಸಗಿಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಹಾಗೂ ಬೇರೆ-ಬೇರೆ ವೃತ್ತಿಯ ಜನರು ಸಹ ಈ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಬಾರಿ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2.5 ಲಕ್ಷ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಇದ್ದು ಈ ಪೈಕಿ 1.75 ಲಕ್ಷ ಜನರು ಈ ಯೋಜನೆಯಡಿ ಕೆಲಸ ಮಾಡಿದ್ದಾರೆ.
ಕೋವಿಡ್ನಿಂದ ಸಂಕಷ್ಟಕ್ಕೊಳಗಾದವರ ಕೈ ಹಿಡಿದ ನರೇಗಾ ಯೋಜನೆ ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲೆಗೆ ಬಂದಿದ್ದ ಸುಮಾರು 47 ಸಾವಿರ ವಲಸೆ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದು, ಸಂಕಷ್ಟಕ್ಕೊಳಗಾಗಿದ್ದ ಸಾಕಷ್ಟು ಜನರಿಗೆ ಬಹಳ ನೆರವಾಗಿದೆ. ಅಲ್ಲದೇ ಕೂಲಿ ಹಣ ಪಾವತಿಯೂ ಕೂಡ ವಿಳಂಬವಾಗಿಲ್ಲ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ವಾಪಸ್ ಊರಿಗೆ ಬಂದಿದ್ದ ಹೆಚ್ಚಿನ ವಲಸೆ ಕಾರ್ಮಿಕರಲ್ಲಿ ಅರ್ಧದಷ್ಟು ಜನರಲ್ಲಿ ಉದ್ಯೋಗ ಖಾತ್ರಿ ಕೂಲಿ ಚೀಟಿಗಳು ಸಹ ಇರಲಿಲ್ಲ. ಅವರಿಗೆ ತೊಂದರೆಯಾಗದ ರೀತಿಯಲ್ಲಿ ಉದ್ಯೋಗ ಚೀಟಿಗಳನ್ನು ಮಾಡಿಸಿ ಕೆಲಸ ನೀಡಲಾಗಿದೆ.
ಒಟ್ಟಾರೆಯಾಗಿ ಉದ್ಯೋಗ ಖಾತ್ರಿ ಯೋಜನೆಯು ಲಾಕ್ಡೌನ್ ಸಂದರ್ಭದಿಂದ ಈವರೆಗೂ ಜನರಿಗೆ ಕೆಲಸ ನೀಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗಿದೆ. ಜೊತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ, ನಾಲಾ ಸ್ವಚ್ಛಗೊಳಿಸಿ ಅಂತರ್ಜಲ ಮಟ್ಟ ಒಂದಿಷ್ಟು ಹೆಚ್ಚಳವಾಗಲು ಸಹ ಕಾರಣವಾಗಿದೆ.