ಕೊಪ್ಪಳ :ಈ ಬಾರಿ ಮಳೆಗಾಲಕ್ಕೂ ಮೊದಲೇಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಳವಾಗಿದೆ. ಕೊಪ್ಪಳ, ವಿಜಯನಗರ, ರಾಯಚೂರು, ಬಳ್ಳಾರಿ ಜಿಲ್ಲೆಗಳ ರೈತರ ಅನ್ನದ ಬಟ್ಟಲು ತುಂಬಿಸುವ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ ನಿನ್ನೆ ಒಂದೇ ದಿನ 8 ಟಿಎಮ್ಸಿ ನೀರು ಹರಿದು ಬಂದಿದೆ. ಇದಕ್ಕೆಲ್ಲ ಕಾರಣ ಅಕಾಲಿಕ ಮಳೆ. ತುಂಗಭದ್ರಾ ಜಲಾನಯನ ಪ್ರದೇಶಲ್ಲಿ ಅಪಾರ ಪ್ರಮಾಣದ ಮಳೆಯಾದ ಹಿನ್ನೆಲೆ ಒಳ ಹರಿವು ಹೆಚ್ಚಾಗಿದೆ.
ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳ.. 65 ವರ್ಷಗಳ ಬಳಿಕ ಮೊದಲ ಬಾರಿಗೆ ಮೇ ತಿಂಗಳಲ್ಲಿನ 28 ಟಿಎಮ್ಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೇವಲ 7 ಟಿಎಮ್ಸಿ ನೀರು ಸಂಗ್ರಹವಾಗಿತ್ತು. ಕೇವಲ ಕುಡಿಯೋ ನೀರು ಹಾಗೂ ಜಲಚರಕ್ಕಾಗಿ ಮಾತ್ರ ನೀರು ಶೇಖರಣೆಯಾಗಿತ್ತು. ಆದರೆ, ಈ ಬಾರಿ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಅನ್ನದಾತ ಖುಷಿಯಾಗಿದ್ದಾನೆ. ಜಲಾಶಯಕ್ಕೆ ಹರಿದು ಬರ್ತಿರುವ ನೀರಿನ ಪ್ರಮಾಣ ನೋಡಿದ್ರೆ, ಇದೇ ತಿಂಗಳಲ್ಲಿ 35 ಟಿಎಮ್ಸಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯಕ್ಕೆ 90 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿದೆ. ಜಲಾಶಯದಿಂದ 255 ಕ್ಯೂಸೆಕ್ ನೀರು ಹೊರಗೆ ಬಿಡಲಾಗ್ತಿದೆ. ಈ ಬಾರಿ 65 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ನೀರು ಬಂದಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಜಲಾಶಯ ಖಾಲಿ ಆಗಿರುತಿತ್ತು. ಆದರೆ, ಇದೀಗ ಜಲಾಶಯದಲ್ಲಿ 28 ಟಿಎಮ್ಸಿ ನೀರು ಸಂಗ್ರಹವಾಗಿರೋದು ಸಹಜವಾಗಿ ರೈತರ ಖುಷಿಗೆ ಕಾರಣವಾಗಿದೆ.
ಇದನ್ನೂ ಓದಿ:ವಾಯುಭಾರ ಕುಸಿತ: ಇನ್ನೂ ಎರಡು ದಿನ ರಾಜ್ಯದಲ್ಲಿ ಗುಡುಗು ಸಹಿತ ಮಳೆ
30 ಟಿಎಮ್ಸಿ ನೀರು ಸಂಗ್ರಹವಾದರೆ, ಜೂನ್ ಮೊದಲ ಹಾಗೂ ಎರಡನೇ ವಾರದಲ್ಲಿ ರೈತರು ಭತ್ತ ನಾಟಿ ಮಾಡುತ್ತಾರೆ. ಹೀಗಾಗಿ, ಸಹಜವಾಗಿ ನಾಲ್ಕು ಜಿಲ್ಲೆಯ ರೈತರು ಇದೀಗ ಮೊದಲ ಬೆಳೆ ಬೆಳೆಯೋಕೆ ಸಜ್ಜಾಗಿದ್ದಾರೆ. ಇನ್ನು ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರ್ತಿರೋ ಹಿನ್ನೆಲೆ ಪ್ರವಾಸಿಗರು ಜಲಾಶಯಕ್ಕೆ ಆಗಮಿಸಿ ಅಲ್ಲಲ್ಲಿ ಫೋಟೋಗೆ ಪೋಜ್ ಕೊಡುವ ದೃಶ್ಯ ಕಂಡು ಬರುತ್ತಿದೆ. ಸಂಗ್ರಹವಾಗಿರುವ ನೀರನ್ನ ಸಮಪರ್ಕವಾಗಿ ಅಧಿಕಾರಿಗಳು ಉಪಯೋಗಿಸಿ ರೈತರಿಗೆ ಅನಕೂಲ ಮಾಡಿಕೊಡಬೇಕು ಅನ್ನೋದು ಈ ಭಾಗದ ರೈತರ ಒತ್ತಾಯವಾಗಿದೆ.