ಕೊಪ್ಪಳ :ಕಡು ಬಡತನದಲ್ಲಿ ಅರಳಿರುವ ಪ್ರತಿಭೆ ಫರೀದಾ ಬೇಗಂ ಎಂಬುವರು ಯುಟ್ಯೂಬ್‌ನಲ್ಲಿ ಪಠ್ಯ ಆಲಿಸುತ್ತಾ, ಹೂಕಟ್ಟುತ್ತಾ, ಮನೆ ಕೆಲಸ ಮಾಡುತ್ತಾ, ಇತ್ತೀಚೆಗೆ ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದಾರೆ.
ಹೂಕಟ್ಟಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಈ ಕುಟುಂಬದಲ್ಲಿ ಬಡತನದ ಮಧ್ಯೆಯೂ ಛಲಬಿಡದೆ ಪಿಎಸ್ಐ ಆಗಿ ಆಯ್ಕೆಯಾಗುವ ಮೂಲಕ ಬೇಗಂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರಿನ ಬಸ್ ನಿಲ್ದಾಣ ಬಳಿ ಹೂವು ಮಾರುವ ಮೌಲಾಹುಸೇನ ಪಟೇಲ್ ಪುತ್ರಿ ಫರೀದಾ ಈ ಸಾಧನೆಯೊಂದಿಗೆ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ. ಜೊತೆಗೆ ತನ್ನ ತಂಗಿಯೂ ಉನ್ನತ ಹುದ್ದೆಗೇರಲು ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಬೇಗಂ ವ್ಯಕ್ತಪಡಿಸಿದ್ದಾರೆ.
ಮೌಲಾಹುಸೇನ ಅವರದು ತುಂಬು ಕುಟುಂಬ. ಇವರಿಗೆ ಒಟ್ಟು 12 ಜನ ಮಕ್ಕಳು. 5 ಜನ ಗಂಡು ಮಕ್ಕಳು, 7 ಜನ ಹೆಣ್ಮಕ್ಕಳಿದ್ದಾರೆ. ಇಡೀ ಕುಟುಂಬ ಹೂ ಕಟ್ಟಿ ಮಾರುವ ಕೆಲಸ ಮಾಡುತ್ತಾರೆ. ತಮ್ಮ ಮಕ್ಕಳು ಉತ್ತಮವಾಗಿ ಓದಿ ಉನ್ನತ ಹುದ್ದೆಯಲ್ಲಿರಬೇಕೆಂಬ ಆಸೆ ಮೌಲಾಹುಸೇನ ಅವರದಾಗಿತ್ತು. 7 ತಿಂಗಳ ಹಿಂದಷ್ಟೇ ಮೃತಪಟ್ಟಿರುವ ಮೌಲಾಹುಸೇನ ಅವರ ಈ ಆಸೆಯನ್ನು ಇದೀಗ 9ನೇ ಪುತ್ರಿ ಫರೀದಾ ಬೇಗಂ ಪೂರೈಸಿದ್ದಾಳೆ.