ಕರ್ನಾಟಕ

karnataka

ETV Bharat / state

ಸಭೆಗೆ ಒಂದೂವರೆ ಗಂಟೆ ತಡ: ಜನರಿಂದ ಆಕ್ಷೇಪ, ಕ್ಷಮೆಯಾಚಿಸಿದ ಎಸಿ

ಹನುಮಮಾಲಾ ವಿರಮಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ತಡವಾಗಿ ಆಗಮಿಸಿದ ಸಹಾಯಕ ಆಯುಕ್ತ ಜನರಲ್ಲಿ ಕ್ಷಮೆಯಾಚಿಸಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.

apologized for coming late
ಎಸಿ ಸಭೆಗೆ ಒಂದೂವರೆ ಗಂಟೆ ತಡ

By ETV Bharat Karnataka Team

Published : Dec 17, 2023, 9:30 AM IST

Updated : Dec 17, 2023, 11:59 AM IST

ಸಭೆಗೆ ಒಂದೂವರೆ ಗಂಟೆ ತಡ: ಆಕ್ಷೇಪಕ್ಕೆ ಕ್ಷಮೆಯಾಚಿಸಿದ ಎಸಿ

ಗಂಗಾವತಿ (ಕೊಪ್ಪಳ):ಅಂಜನಾದ್ರಿ ಬೆಟ್ಟದಲ್ಲಿ ಡಿ. 24ರಂದು ನಡೆಯಲಿರುವ ಹನುಮಮಾಲಾ ವಿರಮಣ ಕಾರ್ಯಕ್ರಮದ ಅಂಗವಾಗಿ ನಗರದ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ಒಂದೂವರೆ ಗಂಟೆ ಕಾಲ ತಡವಾಗಿ ಆಗಮಿಸಿದ ಸಹಾಯಕ ಆಯುಕ್ತ ಜನರ ಆಕ್ಷೇಪಕ್ಕೆ ಕೊನೆಗೆ ಕ್ಷಮೆಯಾಚಿಸಿದ ಘಟನೆ ಶನಿವಾರ ನಡೆಯಿತು.

ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಹನುಮಮಾಲೆಯ ಸಿದ್ಧತೆ ಕೈಗೊಳ್ಳಲು ನಾನಾ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು, ವಿಶ್ವ ಹಿಂದು ಪರಿಷತ್, ಬಜರಂಗ ದಳ ಪ್ರಮುಖರ ಸಭೆ ಕರೆಯಲಾಗಿತ್ತು. ಸಹಾಯಕ ಆಯುಕ್ತ ಹಾಗೂ ಹನುಮಮಾಲಾ ವಿರಮಣ ಕಾರ್ಯಕ್ರಮದ ನೋಡಲ್ ಅಧಿಕಾರಿ ಕ್ಯಾಪ್ಟನ್ ಮಹೇಶ್​ ಮಾಲಗಿತ್ತಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.

ಮಧ್ಯಾಹ್ನ ಮೂರು ಗಂಟೆಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಧಿಕಾರಿ 4.30ಕ್ಕೆ ಆಗಮಿಸಿದರು. ಸಹಾಯಕ ಆಯುಕ್ತರ ನಿರೀಕ್ಷೆಯಲ್ಲಿ ಒಂದು ಕಡೆ ಅಧಿಕಾರಿಗಳು ಮತ್ತೊಂದು ಕಡೆ ಸಾರ್ವಜನಿಕರು ಕಾದು ಕಾದು ಸುಸ್ತಾದರು. ಒಂದು ಹಂತದಲ್ಲಿ ಸಭೆ ಬಹಿಷ್ಕರಿಸುವ ನಿರ್ಧಾರಕ್ಕೆ ಸಂಘಟನೆಗಳ ಪ್ರಮುಖರು ಬಂದರು. ಆದರೆ ತಹಶಿಲ್ದಾರ್​ ವಿಶ್ವನಾಥ್ ಮುರಡಿ ಮನವಿ ಮೇರೆಗೆ ಸಭೆಗೆ ಹಾಜರಾದರು.

ಕ್ಷಮೆ ಕೋರಿದ ಎಸಿ:ಸಭೆಗೆ ಹಾಜರಾಗುತ್ತಿದ್ದಂತೆ ಸಹಾಯಕ ಆಯುಕ್ತ ಮಹೇಶ್ ಮಾಲಗಿತ್ತಿ, ಸಿದ್ಧತೆಗಳ ಬಗ್ಗೆ ಚರ್ಚಿಸಲು ಆರಂಭಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ನಮಗೇನು ಮಾಡಲು ಬೇರೆ ಕೆಲಸ ಇಲ್ಲವೇ? ಸಮಯಕ್ಕೆ ಸರಿಯಾಗಿ ಹಾಜರಾಗಿದಿದ್ದರೆ ಸಭೆ ಆಯೋಜಿಸುವ ಅಗತ್ಯ ಏನಿತ್ತು ಎಂದು ಕೆಲ ಮುಖಂಡರು ಪ್ರಶ್ನಿಸಿದರು. ಭಾನುವಾರಕ್ಕೆ ಸಭೆ ಮುಂದೂಡುವಂತೆ ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹೇಶ್​, ನಾನು ಮ. 12 ಗಂಟೆಗೆ ಗಂಗಾವತಿಗೆ ಬಂದಿದ್ದೇನೆ. ಆದರೆ ತಹಶಿಲ್ದಾರ್​ ಕಚೇರಿಯಲ್ಲಿ ಜಮೀನಿನ ವಿವಾದಗಳ ಪ್ರಕರಣ ಇತ್ಯರ್ಥದ ವಿಚಾರಣೆ ನ್ಯಾಯಾಲಯವಿತ್ತು. ಹೀಗಾಗಿ ಸಭೆಗೆ ವಿಳಂಭವಾಗಿದೆ. ಅಲ್ಲದೇ ಸಭೆ ನಾಲ್ಕು ಗಂಟೆಯ ಬಳಿಕ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ಕಣ್ತಪ್ಪಿನಿಂದ 3 ಗಂಟೆಗೆ ನಿಗದಿ ಮಾಡಿದ್ದಾರೆ. ವಿಳಂಬಕ್ಕೆ ಕ್ಷಮೆ ಕೋರುತ್ತೇನೆ ಎಂದು ಎಸಿ ಹೇಳಿದ ಬಳಿಕ ಸಭೆ ಆರಂಭವಾಯಿತು.

ಹನುಮ ಜಯಂತಿಗೆ ಡಿ.23 ಮತ್ತು 24ರಂದು ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಲಿದ್ದು, ಸೂಕ್ತ ರಕ್ಷಣೆ ನೀಡಬೇಕಿರುವ ಪೊಲೀಸ್ ಅಧಿಕಾರಿಗಳೇ ಸಭೆಗೆ ಹಾಜರಾಗಿಲ್ಲ. 3 ಗಂಟೆಗೆ ಬರಬೇಕಿದ್ದ ಪೊಲೀಸ್ ಅಧಿಕಾರಿಗಳು, 4.30 ಆದರೂ ಇಲ್ಲ ಎಂದು ಸಂಘಟಕರು ಆಕ್ಷೇಪ ವ್ಯಕ್ತಪಡಿಸಿದರು.

ತಕ್ಷಣ ಪೊಲೀಸ್ ಅಧಿಕಾರಿಗಳನ್ನು ಕರೆಯಿಸುವುದಾಗಿ ಸಭೆಗೆ ತಿಳಿಸಿದ ತಹಶಿಲ್ದಾರ್​ ವಿಶ್ವನಾಥ ಮುರಡಿ, ದೂರವಾಣಿ ಮೂಲಕ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಸಭೆಗೆ ಬರುವಂತೆ ಸೂಚನೆ ನೀಡಿದ ಬಳಿಕ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಸಭೆಗೆ ಹಾಜರಾದರು.

ಇದನ್ನೂ ಓದಿ:ಅಂಜನಾದ್ರಿ ದೇಗುಲ: ₹20.36 ಲಕ್ಷ ಕಾಣಿಕೆ ಸಂಗ್ರಹ; ವಿವಿಧ ದೇಶಗಳ ಕರೆನ್ಸಿ ಪತ್ತೆ

Last Updated : Dec 17, 2023, 11:59 AM IST

ABOUT THE AUTHOR

...view details