ಕುಷ್ಟಗಿ: 2020-21ನೇ ಸಾಲಿನ ಸ್ವಯಂ ಬೆಳೆ ಸಮೀಕ್ಷೆ ಯೋಜನೆಯನ್ನು ಕೃಷಿ ಉತ್ಸವದಂತೆ ನಿರ್ವಹಿಸಬೇಕೆಂದು ತಹಶೀಲ್ದಾರ ಎಂ.ಸಿದ್ದೇಶ್ ತಾಲೂಕಿನ ರೈತರಿಗೆ ಕರೆ ನೀಡಿದ್ಧಾರೆ.
ಬೆಳೆ ಸಮೀಕ್ಷೆ ಯೋಜನೆಯನ್ನು ಕೃಷಿ ಉತ್ಸವದಂತೆ ಆಚರಿಸಿ: ರೈತರಿಗೆ ತಹಶೀಲ್ದಾರ್ ಕರೆ
ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ನ್ನು ಸರ್ಕಾರ ಪರಿಚಯಿಸಿದ್ದು, ಕುಷ್ಟಗಿ ತಾಲೂಕಿನ ರೈತರೆಲ್ಲರೂ ಈ ಸರ್ವೇಗೆ ಸಾಥ್ ನೀಡಿ, ಈ ತಿಂಗಳ 24ರ ಒಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು ಎಂದು ತಹಶೀಲ್ದಾರ್ ಎಂ.ಸಿದ್ದೇಶ್ ಹೇಳಿದ್ದಾರೆ.
ನಗರದ ತಹಶೀಲ್ದಾರ ಕಚೇರಿಯಲ್ಲಿ ವಿಶಿಷ್ಟ ತಂತ್ರಾಂಶದ ಆ್ಯಪ್ ಮೂಲಕ ಸ್ವಯಂ ಬೆಳೆ ಸಮೀಕ್ಷೆ ಕಾರ್ಯ ನಿರ್ವಹಣೆ ಸಭೆಯಲ್ಲಿ ಫಾರ್ಮರ್ ಕ್ರಾಪ್ ಆ್ಯಪ್ ಸಮೀಕ್ಷೆ ಕುರಿತು ಮಾಹಿತಿ ನೀಡಿದರು. ಈ ಹಿಂದಿನ ಸಮೀಕ್ಷೆಗಳು ಇಲಾಖಾ ಅಧಿಕಾರಿಗಳಿಂದ ಕೇಂದ್ರೀಕೃತವಾಗಿದ್ದವು, ಆದರೆ ಈ ವಿಶಿಷ್ಟ ತಂತ್ರಾಂಶದ ಆ್ಯಪ್ ರೈತರಿಂದ ಕೇಂದ್ರೀಕೃತವಾಗಿದೆ. ಈ ಕಾರ್ಯವನ್ನು ನೀವು ಉತ್ಸವದ ರೀತಿಯಲ್ಲಿ ನಿರ್ವಹಿಸಬೇಕಿದೆ. ಇದಕ್ಕೆ ಕಂದಾಯ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಮಾರ್ಗದರ್ಶಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಈ ಸಮೀಕ್ಷಾ ಕಾರ್ಯದಲ್ಲಿ ಎಲ್ಲಾ ರೈತ ಬಾಂಧವರು ತಮ್ಮನ್ನು ತಾವು ತೊಡಗಿಸಿಕೊಂಡು ಸಹಕಾರ ನೀಡಬೇಕಿದೆ. ಈ ಸರ್ವೇಗೆ ರೈತರ ಬಳಿಯೇ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಇರಬೇಕು ಎಂಬುದಿಲ್ಲ, ತಮ್ಮ ಮನೆಯಲ್ಲಿ ಯಾರ ಬಳಿ ಈ ಮೊಬೈಲ್ ಇದ್ದರೂ ಸಹ ಅದರಿಂದ ಸಮೀಕ್ಷಾ ವಿವರ ದಾಖಲಿಸಬಹುದು. ಈ ತಿಂಗಳ 24ರೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಸರ್ಕಾರ ಸೂಚಿಸಿದ್ದು, ಆ.24ರ ನಂತರ ಉಳಿದವರ ಸಮೀಕ್ಷಾ ಕಾರ್ಯವನ್ನು ನಿಯೋಜಿಸಿ ಪಿಆರ್ಸಿ ಹಾಗೂ ಇಲಾಖಾ ಅಧಿಕಾರಿಗಳ ಮೂಲಕ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.