ಗಂಗಾವತಿ:ಏಪ್ರಿಲ್ 27ರಂದು ನಡೆಯಲಿರುವ ಹನುಮ ಜಯಂತಿ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಹನುಮಮಾಲೆ ವಿರಮಣಕ್ಕೆ ಅವಕಾಶ ನೀಡುವಂತೆ ಹನುಮ ಮಾಲಾ ಸೇವೆ ಸಮಿತಿ ಈ ಹಿಂದೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ತಹಶೀಲ್ದಾರ್ ನಿರಾಕರಿಸಿದ್ದಾರೆ.
ಹನುಮ ಮಾಲೆ ನಿಮಜ್ಜನೆ ಅಥವಾ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಹನುಮ ಬೆಟ್ಟದ ಪ್ರವೇಶಕ್ಕೆ ಸಹ ಅವಕಾಶ ನೀಡುವುದಿಲ್ಲ ಎಂದು ದೇಗುಲದ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಗಂಗಾವತಿ ತಹಶೀಲ್ದಾರ್ ಸ್ಪಷ್ಟನೆ ಹನುಮ ಜಯಂತಿ ವೇಳೆ ಅಂಜನಾದ್ರಿ ದೇಗುಲದಲ್ಲಿ ಹೋಮ ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಆಚರಿಸಲು ಹಾಗೂ ಹನುಮ ಮಾಲೆ ನಿಮಜ್ಜನೆಗೆ ಅವಕಾಶ ನೀಡುವಂತೆ ಧಾರ್ಮಿಕ ಮುಖಂಡ ಅಯ್ಯನಗೌಡ ಹೇರೂರು ನೇತೃತ್ವದಲ್ಲಿ ಮನವಿ ಮಾಡಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ತಹಶೀಲ್ದಾರ್, ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಕಾಶ ನೀಡುವುದಿಲ್ಲ. ಅಲ್ಲದೇ ಸರ್ಕಾರದ ಸುತ್ತೋಲೆ, ಆದೇಶದ ಪ್ರಕಾರ ಯಾವುದೇ ದೇಗುಲಗಳಲ್ಲಿ ಸಾಮೂಹಿಕವಾಗಿ ಸೇರುವಂತಿಲ್ಲ ಎಂದು ಆದೇಶಿಸಿದ್ದಾರೆ.