ಕುಷ್ಟಗಿ(ಕೊಪ್ಪಳ): ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿ ಗುತ್ತಿಗೆ, ಹೊರಗುತ್ತಿಗೆಯಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಉದ್ಯೋಗ ಭದ್ರತೆ ಹಾಗೂ ಕೋವಿಡ್-19 ಸಲುವಾಗಿ ಜೀವ ಲೆಕ್ಕಿಸದೇ ಸೇವಾ ನಿರತ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ, ಕಪ್ಪು ಪಟ್ಟಿ ಧರಿಸಿದ ಸಿಬ್ಬಂದಿ ಸಾಂಕೇತಿಕ ಪ್ರತಿಭಟನೆ ನಡೆಸಿತು.
ಕುಷ್ಟಗಿ: ವಿಶೇಷ ಪ್ಯಾಕೇಜ್ಗೆ ಆಗ್ರಹಿಸಿ ಗುತ್ತಿಗೆ ನೌಕರರಿಂದ ಸಾಂಕೇತಿಕ ಪ್ರತಿಭಟನೆ - ವಿಶೇಷ ಪ್ಯಾಕೆಜ್
ವೈದ್ಯಕೀಯ ಇಲಾಖೆಯಲ್ಲಿ ಸಾಕಷ್ಟು ಜನ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಎಲ್ಲರಿಗೂ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಿಬ್ಬಂದಿಗಳಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪ್ರಕಾಶಗೌಡ ಬೆದವಟ್ಟಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಗವಿಸಿದ್ಧಪ್ಪ. ಡಿ.ಉಪ್ಪಾರ ಮತ್ತಿತರರು, ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದೇ ವೇಳೆ, ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು ಅವರಿಗೆ ಮನವಿ ಸಲ್ಲಿಸಿದರು.
ಸಿಬ್ಬಂದಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶಗೌಡ ಬೆದವಟ್ಟಿ, ಕೊರೊನಾ ವೈರಸ್ನಿಂದಾಗಿ ನಮ್ಮ ಸಿಬ್ಬಂದಿ ತುರ್ತು ಘಟಕಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಸೇವಾ ನಿರತರಾಗಿದ್ದಾರೆ. ಉದ್ಯೋಗ ಭದ್ರತೆ ಇಲ್ಲದೆಯೂ ಮಹಾಮಾರಿ ಕೊರೊನಾ ವಿರುದ್ದ ಹೋರಾಟದಲ್ಲಿ ಜೀವ ಲೆಕ್ಕಿಸದೇ ಸೇವೆಗಳ ಅನುಷ್ಠಾನ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲ, ಆರೋಗ್ಯ ಮತ್ತು ಜೀವ ವಿಮೆ, ಎಚ್.ಆರ್. ಪಾಲಿಸಿ ಇದ್ಯಾವುದು ಇಲ್ಲ. ಆದ್ದರಿಂದ ಈ ಎಲ್ಲ ಬೇಡಿಕೆಳು ಸೇರಿದಂತೆ ಒಟ್ಟು 14 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.