ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಹಾಗೂ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂರುಜನ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸರಿಹಾಳ ಹಾಗೂ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳನ್ನು ಕರ್ತವ್ಯಲೋಪದಡಿ ಅಮಾನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ:ಆರೋಗ್ಯ ಅಧಿಕಾರಿಗಳ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ತಪಾಸಣಾ ವರದಿಯಲ್ಲಿರುವಂತೆ ಗ್ರಾಮದಲ್ಲಿ ಸ್ವಚ್ಚತೆ, ನೈರ್ಮಲೀಕರಣ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವ ಜವಾಬ್ದಾರಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಕಂಡು ಬಂದಿರುತ್ತದೆ.
ಈ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ ವರದಿಯನ್ವಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪ್ರಭಾರ) ಹಾಗೂ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪ್ರಭಾರ) ಇವರುಗಳು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಈ ಪ್ರಯುಕ್ತ ರವೀಂದ್ರ ಕುಲಕರ್ಣಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪುಭಾರ), ಬಸರಿಹಾಳ ಗ್ರಾಮ ಪಂಚಾಯಿತಿ, ಕನಕಗಿರಿ ತಾಲೂಕು, ಕೊಪ್ಪಳ ಜಿಲ್ಲೆ ಹಾಗೂ ನಾಗೇಶ ಅರಳಿಗನೂರು, ಗ್ರೇಡ್-1 ಕಾರ್ಯದರ್ಶಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪ್ರಭಾರ), ಬಿಜಕಲ್ ಗ್ರಾಮ ಪಂಚಾಯಿತಿ, ಕುಷ್ಟಗಿ ತಾಲೂಕು, ಕೊಪ್ಪಳ ಇವರು ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸೆಕ್ಷನ್ (2)ರನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಸೆಕ್ಷನ್ (77) & (85) ರನ್ವಯ ಎಸಗಿರುವ ಆರೋಪಗಳ ಕುರಿತು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಾಮಾವಳಿಗಳು, 1957ರ ನಿಯಮ 10(1)(3) ರನ್ವಯ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. ಜೂನ್ 6 ರಂದು ಕಲಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವಾಂತಿ, ಭೇದಿಯಾಗಿ ಆಸ್ಪತ್ರಗೆ ಮೂವರು ಸಾವನ್ನಪ್ಪಿದ್ದರು. ಇದು ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.
ಇದನ್ನೂ ಓದಿ:ಅಕ್ರಮ ಮರಳು ದಂಧೆಗೆ ಹೆಡ್‌ಕಾನ್ಸ್‌ಟೇಬಲ್ ಹತ್ಯೆ ಪ್ರಕರಣ: ಆರೋಪಿ ಕಾಲಿಗೆ ಗುಂಡು, CPI, PSI, ಕಾನ್ಸ್‌ಟೇಬಲ್ ಅಮಾನತು