ಕುಷ್ಟಗಿ(ಕೊಪ್ಪಳ):ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಅನಿರ್ದಿಷ್ಟವಾಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆ ಸೋಮವಾರ ವಿದ್ಯಾರ್ಥಿಗಳು ಅಘೋಷಿತವಾಗಿ ತರಗತಿ ಬಹಿಷ್ಕರಿಸಿದರು.
ತರಗತಿ ಬಹಿಷ್ಕರಿಸಿ ಅಘೋಷಿತ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು ಎಂದಿನಂತೆ ಬೆಳಗ್ಗೆ ಮೂರು ತರಗತಿಗಳು ಪೂರ್ಣಕಾಲಿಕ ಉಪನ್ಯಾಸಕರಿಂದ ಆರಂಭವಾಗಿದ್ದವು. ಇನ್ನುಳಿದ ತರಗತಿಗಳಲ್ಲಿ ಉಪನ್ಯಾಸಕರು ಇಲ್ಲದಿರುವ ಹಿನ್ನೆಲೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಕಾಲೇಜು ಆವರಣದಲ್ಲಿ ಜಮಾಯಿಸಿದರು. ತರಗತಿಗಳನ್ನು ಬಹಿಷ್ಕರಿಸಲು ಉಪನ್ಯಾಸಕರ ಮೇಲೆ ಒತ್ತಡ ಹೇರಿದ್ದರಿಂದ ಸದರಿ ವಿದ್ಯಾರ್ಥಿಗಳು ಸಹ ತರಗತಿ ಬಹಿಷ್ಕರಿಸಿದರು.
ಪ್ರಾಚಾರ್ಯರಿಗೆ ಮನವಿ:
ನಂತರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ತಹಶೀಲ್ದಾರ್ರ ಕಚೇರಿಗೆ ಹೋಗುವ ತಯಾರಿಯಲ್ಲಿರುವಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಏಕಾಏಕಿ ಪ್ರತಿಭಟನೆಗೆ ಅವಕಾಶ ಇಲ್ಲ. ಒಂದೆರೆಡು ದಿನ ಮುನ್ನವೇ ಮಾಹಿತಿ ನೀಡಬೇಕು. ಪ್ರತಿಭಟನೆಯಲ್ಲಿ ಏನಾದರೂ ಎಡವಟ್ಟು ಆದರೆ, ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು. ಈ ಹಿನ್ನೆಲೆ ವಿದ್ಯಾರ್ಥಿಗಳು ತಹಶೀಲ್ದಾರರ ಕಚೇರಿಗೆ ಮೆರವಣಿಗೆ ಕೈ ಬಿಟ್ಟು ಪ್ರಾಚಾರ್ಯ ರವಿ ಹಾದಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದು, ಈಗ ಕಾಲೇಜು ಪ್ರಾರಂಭವಾಗಿವೆ. ಈ ಸಂದರ್ಭದಲ್ಲಿ 50 ಅತಿಥಿ ಉಪನ್ಯಾಸಕರು ಮುಷ್ಕರ ನಿರತರಾಗಿದ್ದು, ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿರುವ ಸದರಿ ಕಾಲೇಜಿಗೆ ಇದರ ಬಿಸಿ ತಟ್ಟಿದೆ. ಬೆಳಗಾವಿ ಚಳಿಗಾಲದ ಆಧಿವೇಶನದಲ್ಲಿ ಈ ಸಮಸ್ಯೆ ಇತ್ಯರ್ಥವಾಗಬೇಕಿದೆ.
ಶಾಸಕ ಬಯ್ಯಾಪುರ ಅಸಹಾಯಕತೆ:
ರಾಜ್ಯಾದ್ಯಂತ ಅತಿಥಿ ಶಿಕ್ಷಕರು ಮುಷ್ಕರ ನಿರತರಾಗಿದ್ದು ಸರ್ಕಾರವೇ ಕ್ರಮ ಕೈಗೊಳ್ಳಬೇಕಿದೆ. ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಅತಿಥಿ ಉಪನ್ಯಾಸಕರ ಮುಷ್ಕರದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ನಿಜ. ಸದ್ಯದ ಪರಿಸ್ಥಿತಿಯಲ್ಲಿ ಲಭ್ಯವಿರುವ ತರಗತಿಗಳಾದರೂ ನಡೆಯಬೇಕಿದೆ. ಪರಿಸ್ಥಿತಿ ಹೀಗಿದ್ದು ವಿದ್ಯಾರ್ಥಿಗಳ ಮನವೊಲಿಸಿ ತರಗತಿ ನಡೆಸಬೇಕಿದೆ.
ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ವಿಷಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಅವರಿಗೆ ಮನವರಿಕೆ ಮಾಡಲಾಗಿದೆ. ಅಲ್ಲದೇ ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನ ಆಗಿಲ್ಲ. ನಾನೇನು ಮಾಡಲಿ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಅಸಮಾಧಾನ ವ್ಯಕ್ತಪಡಿಸಿದರು.