ಕೊಪ್ಪಳ: ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾ - ಕಾಲೇಜುಗಳನ್ನು ಆರಂಭಿಸದ ಕಾರಣ ಕಲಿಯಬೇಕಾಗಿದ್ದ ಗ್ರಾಮೀಣ ಭಾಗದಲ್ಲಿನ ಮಕ್ಕಳು ಈಗ ಕೃಷಿ ಕೂಲಿ ಕಾಯಕದತ್ತ ಹೊರಳಿದ್ದಾರೆ.
ಎಲ್ಲವೂ ಸರಿಯಾಗಿದ್ದರೆ ಜೂನ್ನಲ್ಲಿಯೇ ಶಾಲಾ - ಕಾಲೇಜುಗಳು ಪ್ರಾರಂಭವಾಗಿ ಮಕ್ಕಳು ಕಲಿಕೆಯಲ್ಲಿ ನಿರತರಾಗಿರುತ್ತಿದ್ದರು. ಆದರೆ, ಕೊರೊನಾದಿಂದಾಗಿ ಜ್ಞಾನ ದೇಗುಲಗಳ ಬಾಗಿಲು ಇನ್ನೂ ಕೆಲವು ತಿಂಗಳು ತೆರೆಯುವುದೇ ಅನುಮಾನವಾಗಿದೆ.
ಕೂಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ - ಕಾಲೇಜುಗಳ ಮಕ್ಕಳು ದುಡಿಮೆಯತ್ತ ಮುಖಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕೃಷಿ ಚಟುವಟಿಕೆಯ ಕೂಲಿ ಕೆಲಸಗಳತ್ತ ಗಮನ ಹರಿಸಿದ್ದಾರೆ. ಹೆಸರು ವಕ್ಕಲಿ ಸೇರಿದಂತೆ ಅನೇಕ ಕೆಲಸಗಳಿಗೆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಹೋಗುತ್ತಿದ್ದಾರೆ.
ಕೃಷಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ತೆರೆಯದ ಕಾರಣ ಮನೆಯಲ್ಲಿ ಕುಳಿತು ಏನು ಮಾಡುವುದು ಎಂದು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ದಿನಕ್ಕೆ ₹ 150 ಕೂಲಿ ಹಣ ಸಿಗುತ್ತದೆ. ಇದರಿಂದಾಗಿ ಮನೆಯವರಿಗೆ ನಮ್ಮಿಂದಲೂ ಸಹಾಯವಾದಂತಾಗುತ್ತದೆ. ಶಾಲಾ-ಕಾಲೇಜುಗಳು ಪ್ರಾರಂಭವಾದರೆ ಶಾಲೆಗೆ ಹೋಗುತ್ತೇವೆ. ಅಲ್ಲಿಯವರೆಗೂ ಹೊಲದ ಕೆಲಸಕ್ಕೆ ಹೋಗುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.