ಕುಷ್ಟಗಿ (ಕೊಪ್ಪಳ): ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರದು ಕಾಂಗ್ರೆಸ್ ಬಣ್ಣ, ಬಿಜೆಪಿಯ ಬುದ್ಧಿ ಎಂದು ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿದ್ದಾರೆ.
ಕುಷ್ಟಗಿಯಲ್ಲಿ ಈಟಿವಿ ಭಾರತದ ಜತೆ ಮಾತನಾಡಿದ ಅವರು, ಕುಷ್ಟಗಿಯ ಬಿಜೆಪಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು, ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ದೊಡ್ಡನಗೌಡ ಪಾಟೀಲ ಅವರ ವಿರುದ್ಧ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ನೀಡಿರುವ ಹೇಳಿಕೆ ಖಂಡಿಸುತ್ತೇನೆ.
ಶಾಸಕ ಹಿಟ್ನಾಳ್ ವಿರುದ್ಧ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಪ್ರತಿಕ್ರಿಯೆ.. ಸಿದ್ದರಾಮಯ್ಯ ಮೆಚ್ಚಿಸಲು ದೊಡ್ಡನಗೌಡ ಪಾಟೀಲ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಶರಣು ತಳ್ಳಿಕೇರಿ ಆಕ್ರೋಶ ಹೊರ ಹಾಕಿದ್ದಾರೆ. ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕೊಪ್ಪಳ ಶಾಸಕ ಹಿಟ್ನಾಳ್ ಅವರ ವರ್ಚಸ್ಸು ಕಡಿಮೆಯಾಗಿದೆ.
ಕೊಪ್ಪಳ ವಿಧಾನಸಭೆ ಕ್ಷೇತ್ರಕ್ಕೆ ತಮ್ಮ ಮನೆಯಲ್ಲಿಯೇ ಪೈಪೋಟಿ ಇದ್ದು, ಕುಷ್ಟಗಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಬಗ್ಗೆ ಮಾತನಾಡಲು ಇವರು ಯಾರು ಎಂದು ಪ್ರಶ್ನಿಸಿದ್ದಾರೆ. ಹಾಲಿನಲ್ಲಿ ಹುಳಿ ಹಿಂಡುವ ಹೇಳಿಕೆ ನೀಡಬಾರದು. ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ರಾಷ್ಟ್ರೋತ್ಥಾನ ಶಾಲೆಯ ವಿದ್ಯಾರ್ಥಿ.
ಅವರಿಗೂ ಆರ್ಎಸ್ಎಸ್ ಹಿನ್ನೆಲೆ ಇದೆ. ಅವರು ರಾಜಕಾರಣದ ಉದ್ದೇಶದಿಂದ ಕಾಂಗ್ರೆಸ್ನಲ್ಲಿದ್ದಾರೆ. ಮುಂದೆ ಬಿಜೆಪಿ ಸೇರಬಹುದು ಎಂದು ಹೇಳಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹನುಮ ಜನಿಸಿದ ಅಂಜನಾದ್ರಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮಸ್ಕಿ ಚುನಾವಣೆಯಲ್ಲೂ ವಿಜಯೇಂದ್ರ ವಿಜಯಯಾತ್ರೆ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.