ಕೊಪ್ಪಳ: ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರಲು ಪ್ರತಾಪಗೌಡ ಅವರ ತ್ಯಾಗವೂ ಕಾರಣ. ಹೀಗಾಗಿ ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಜಿಲ್ಲೆಯ ಕನಕಗಿರಿಯ ಶ್ರೀ ಕನಕಾಚಲ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಸ್ಕಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪ್ರತಾಪಗೌಡ ಅವರಿಗೆ ಜನರು ಆಶೀರ್ವಾದ ಮಾಡುತ್ತಾರೆ. ಜನರು ಬಿಜೆಪಿಗೆ ಬೆಂಬಲ ಕೊಡುವ ವಿಶ್ವಾಸ ಇದೆ. ಪ್ರತಾಪಗೌಡ ಪಾಟೀಲ್ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ. ಅವರು ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಡಿ ವಿಚಾರದಲ್ಲಿ ಮಹಾನ್ ನಾಯಕ ಹಾಗೂ ಮಹಾನ್ ನಾಯಕಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಮಹಾನ್ ನಾಯಕ, ಮಹಾನ್ ನಾಯಕಿ ಯಾರು ಅಂತಾ ತಾವೇ ಹೇಳಬೇಕು. ಈ ವಿಷಯವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಅದು ಗೊತ್ತಾಗಲಿದೆ ಎಂದರು.
ಸಿಡಿ ಪ್ರಕರಣ ಉಪಚುನಾವಣೆಯ ಮೇಲೆ ಪರಿಣಾಮ ಬೀರುವ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ಆ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೆ ಉತ್ತರ ಕೊಡುವುದು ಬೇಡ. ಯಡಿಯೂರಪ್ಪ ಅವರ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ಅನೇಕ ಸವಾಲುಗಳನ್ನು ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಗೆಲ್ಲಬೇಕೆಂಬ ಉದ್ದೇಶದಿಂದ ಯುದ್ಧಕ್ಕೆ ಹೊರಟಿದ್ದೇನೆ. ಯಾವುದೇ ಉಪಚುನಾವಣೆ ಬರಲಿ ಬಿಜೆಪಿ ವಿಜಯಯಾತ್ರೆ ಮುಂದುವರೆದಿದೆ. ಮಸ್ಕಿ ಉಪಚುನಾವಣೆಯಲ್ಲಿಯೂ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರೆಯಲಿದೆ. ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ಆಡಳಿತ ಮಚ್ಚಿಕೊಂಡು ಕೆ.ವಿರುಪಾಕ್ಷಪ್ಪ ಅವರು ಬಿಜೆಪಿಗೆ ಬಂದಿದ್ದಾರೆ. ಅವರು ಯಾವುದೇ ಸ್ಥಾನಮಾನದ ಆಸೆಯಿಂದ ಬಂದಿಲ್ಲ ಎಂದು ಹೇಳಿದರು.