ಗಂಗಾವತಿ(ಕೊಪ್ಪಳ):ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಮುಂದಾದ ಬೆನ್ನಲ್ಲೇ ಸಾರಿಗೆ ಸಚಿವ ಬಿ. ಶ್ರೀರಾಮುಲು, ರೆಡ್ಡಿ ಸಹೋದರ ಶಾಸಕ ಸೋಮಶೇಖರ ರೆಡ್ಡಿ ಹಾಗು ಶಾಸಕ ಪರಣ್ಣ ಮುನವಳ್ಳಿ ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಗೆ ಭೇಟಿ ನೀಡಿದ್ದಾರೆ.
ಆರು ತಿಂಗಳ ಹಿಂದಷ್ಟೇ ತಮ್ಮ ಸ್ವಂತ ಹಣದಲ್ಲಿ ಪಂಪಾ ಸರೋವರದ ಲಕ್ಷ್ಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದ ಶ್ರೀರಾಮುಲು ಬಳಿಕ ಸಾಂಪ್ರದಾಯಿಕವಾಗಿ ಹೋಮ-ಹವನ ಹಮ್ಮಿಕೊಂಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಕಳೆದ ಆರು ತಿಂಗಳಿಂದ ಇತ್ತ ಸುಳಿಯದ ಶ್ರೀರಾಮುಲು ಅವರ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೊಸ ಪಕ್ಷ ಸ್ಥಾಪನೆಯ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿರುವ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ದಿಢೀರ್ ಎಂದು ಅಂಜನಾದ್ರಿಗೆ ಆಗಮಿಸಿರುವುದು ಹಲವು ಪ್ರಶ್ನೆಗಳನ್ನು ಕೂಡ ಮೂಡಿಸಿದೆ.
ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಜನಾರ್ದನ್ ರೆಡ್ಡಿಯ ಹೊಸ ಪಕ್ಷ: ಯಾವಾಗ ರೆಡ್ಡಿಯವರು ಹೊಸ ಪಕ್ಷದ ಕುರಿತು ತಮ್ಮ ಹೇಳಿಕೆ ನೀಡಿದರೊ ಅಲ್ಲಿಂದ ಭಾರತೀಯ ಜನತಾ ಪಕ್ಷದಲ್ಲೇ ಇರ್ತಾರಾ, ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಎಂಬ ಉಹಾ ಪೋಹಗಳು ಎದ್ದಿದ್ದವು. ಕೆಲವು ನಾಯಕರಂತು ಹೊಸ ಪಕ್ಷ ಎಲ್ಲ ಇಲ್ಲ, ಈ ಕುರಿತು ನಾವು ಪಕ್ಷದಲ್ಲಿ ಚರ್ಚೆ ಮಾಡಲಿದ್ದೇವೆ, ನಾಯಕರ ಜೊತೆ ವಿಚಾರಿಸಲಿದ್ದೇವೆ ಎಂದೆಲ್ಲ ಮಾಧ್ಯಮದವರ ಮುಂದೆ ಹೇಳಿದ್ದರು. ಆದರೆ ಇದಕ್ಕೆಲ್ಲ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ತೆರೆ ಎಳೆದಿದ್ದರು.
ನಂತರ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸಾರಿಗೆ ಸಚಿವ ಶ್ರೀರಾಮುಲು ಅವರು ನಮ್ಮದು ರಾಷ್ಟ್ರೀಯ ಪಕ್ಷ, ನಮ್ಮ ಪಕ್ಷಕ್ಕೆ ಅದರದ್ದೇ ಆದ ಸಿದ್ಧಾಂತ ಮತ್ತು ಹಿನ್ನೆಲೆ ಇದೆ. ಸೃಷ್ಟಿಯಾಗಿರುವ ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ರೆಡ್ಡಿಯವರ ಹಾದಿ ಅವರಿಗೆ, ನಮ್ಮ ಹಾದಿ ನಮಗೆ ಜೊತೆಗ ನಮ್ಮ ಅವರ ಸ್ನೇಹಕ್ಕೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು.
ಆದರೆ ಈಗ ಹಲವು ಸಮಯದ ನಂತರ ಅಂಜನಾದ್ರಿಗೆ ಕ್ಷೇತ್ರಕ್ಕೆ ಭೇಟಿ ನೀಡಿರುವುದು ಯಾವ ಕಾರಣಕ್ಕಾಗಿ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚಿಸಲು ಅಧ್ಯಯನ, ವಸತಿ ಸೌಕರ್ಯ ಅಭಿವೃದ್ಧಿ - ಅಮಿತ್ ಶಾ