ಗಂಗಾವತಿ (ಕೊಪ್ಪಳ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಯಾವ್ಯಾವ ಕ್ಷೇತ್ರಕ್ಕೆ, ಜಿಲ್ಲೆಗಳಿಗೆ ಹೋಗುತ್ತಾರೂ ಮತ್ತು ಎಷ್ಟು ಬಾರಿ ರಾಜ್ಯ ಪ್ರವಾಸ ಮಾಡುತ್ತಾರೋ ಅದು ಬಿಜೆಪಿಯ ಗೆಲುವಿನ ಸಂಕೇತ ಮತ್ತು ಶುಭದ ಸಂಕೇತ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಉತ್ತರ ಪ್ರದೇಶ, ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಈ ಅಕ್ಕ-ತಮ್ಮ ಜೋಡಿ ಅಲ್ಲಿ ಕಾಲಿಟ್ಟರು. ಕಾಂಗ್ರೆಸ್ ಸರ್ವ ಪತನವಾಯಿತು. ಈ ಹಿಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕೇವಲ 17, ಗುಜರಾತ್ನಲ್ಲಿ ಎರಡು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಅವರು ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟು ಬಿಜೆಪಿಗೆ ಅನುಕೂಲವಾಗಲಿದೆ. ಅವರು ಇನ್ನೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿ ಎಂದು ವ್ಯಂಗ್ಯವಾಡಿದರು.
ಸದ್ಯ ಕಾಂಗ್ರೆಸ್ ಪರಿಸ್ಥಿತಿ ಸರ್ಕಸ್ ಕಂಪನಿಯ ರೀತಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ನಾಡಿನ ಜನರು ಬಂದ್ ಮಾಡಿಸುತ್ತಾರೆ ಎಂಬ ವಿಶ್ವಾಸ ಇದೆ. ಸಾಕಷ್ಟು ಸರ್ಕಸ್ ಕಂಪನಿಗಳಲ್ಲಿ ಜೋಕರ್ಗಳು ಪ್ರಧಾನ ಪಾತ್ರ ವಹಿಸುತ್ತಾರೆ ಎಂದ ರಾಮುಲು ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಜೋಕರ್ಗೆ ಹೋಲಿಸಿದರು. ಕಾಂಗ್ರೆಸ್ ಸರ್ಕಸ್ ಕಂಪನಿಯನ್ನು ಈ ರಾಜ್ಯದ ಜನ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಂದ್ ಮಾಡಿಸಲಿದ್ದಾರೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯುವುದೇ ಕಾಂಗ್ರೆಸ್ನವರ ಕೆಲಸವಾಗಿದೆ. ಮೋದಿಯನ್ನು ಬೈಯ್ದರೆ ತಾವು ದೊಡ್ಡವರಾಗುತ್ತೇವೆ ಎಂಬ ಕಲ್ಪನೆಯಲ್ಲಿ ಅನಗತ್ಯವಾಗಿ ಮೋದಿಯನ್ನು ಟೀಕಿಸುತ್ತಿರುವುದು ಸರಿಯಲ್ಲ. ದಲಿತ ಸಮಾಜದ ಬಹುದೊಡ್ಡ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಲ್ಲಿ ಮೋದಿಯ ಬಗ್ಗೆ ಅಂಥಹ ಮಾತುಗಳು ಬರುತ್ತವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಅತ್ತ ಕಾಂಗ್ರೆಸ್ ನವರು ಮೋದಿಯನ್ನ ವಿಷ ಸರ್ಪಕ್ಕೆ ಹೋಲಿಸಿದ್ದು, ಇತ್ತ ನಮ್ಮ ಯತ್ನಾಳ್ ಸೋನಿಯಾರನ್ನು ವಿಷಕನ್ಯೆ ಎಂದಿರುವುದು ಸರಿಯಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಸಭ್ಯತೆ ಮುಖ್ಯ ಎಂದು ಹೇಳಿದ್ರು.
ಜನಾರ್ದನ ರೆಡ್ಡಿಗಿಂತ ನನಗೆ ಪಕ್ಷ ಮುಖ್ಯ:ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಅವರೊಂದಿಗೆ ಈಗಲೂ ಸ್ನೇಹವಿದೆ. ಹಾಗಂತ ನಾನು ಪಕ್ಷವನ್ನು ಬಿಟ್ಟುಕೊಡಲಾರೆ. ರೆಡ್ಡಿ ಮತ್ತು ಅವರ ಸ್ನೇಹಕ್ಕಿಂತ ನನಗೆ ಪಕ್ಷ ದೊಡ್ಡದು. ಇದೇ ಕಾರಣಕ್ಕೆ ರೆಡ್ಡಿ ಕ್ಷೇತ್ರವಾದರೂ ಗಂಗಾವತಿಯಲ್ಲಿ ಪರಣ್ಣ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ರೆಡ್ಡಿ ಮತ್ತು ನನ್ನ ಮಧ್ಯ ಈಗಲೂ ಸ್ನೇಹವಿದೆ. ಹಾಗಂತ ನಾನು ರೆಡ್ಡಿಗೆ ಪೂರಕವಾಗಿ ವರ್ತಿಸಲಾರೆ. ರೆಡ್ಡಿ ದಿಢೀರ್ ಎಂದು ಪಕ್ಷ ಸ್ಥಾಪಿಸಿದ್ದಾರೆ. ಹೀಗಾಗಿ ಜನರಿಗೂ ಸ್ವಲ್ಪ ಗೊಂದಲವಾಗಿದೆ. ಇನ್ನು ಸ್ವಲ್ಪ ದಿನಗಳು ಕಳೆದರೆ ರೆಡ್ಡಿ ಮತ್ತು ನನ್ನ ಮಧ್ಯೆ ಅಂತರ ಹೆಚ್ಚಾಗಬಹುದು. ನನ್ನನ್ನು ಗೆಲ್ಲಿಸುವ ಉದ್ದೇಶಕ್ಕಾಗಿಯೇ ರೆಡ್ಡಿ ಬಳ್ಳಾರಿ ಗ್ರಾಮೀಣದಲ್ಲಿ ಮತ್ತು ನನ್ನ ಅಳಿಯ ಪ್ರತಿನಿಧಿಸುವ ಕಂಪ್ಲಿಯಲ್ಲಿ ಕೆಆರ್ಪಿಪಿ ಅಭ್ಯರ್ಥಿಗಳನ್ನು ಹಾಕಿಲ್ಲ ಎಂಬ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲ ಕಲ್ಪಿತ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಕುಂದಗೋಳದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಪ್ರಿಯಾಂಕಾ ಗಾಂಧಿ..