ಕೊಪ್ಪಳ:ಕೊರೊನಾ ಸೋಂಕಿನ ಎರಡನೇ ಅಲೆಯ ಅಬ್ಬರ ತಗ್ಗಿರುವುದರಿಂದ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಮುಂದುವರೆದಿದ್ದು, ಜುಲೈ 26 ರಿಂದ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇನ್ನು ಕಾಲೇಜು ಆರಂಭದ ಮೊದಲ ದಿನವೇ ಶ್ರೀ ಕೃಷ್ಣದೇವರಾಯ ವಿವಿ ಪದವಿ ತರಗತಿಗಳಿಗೆ ಪರೀಕ್ಷೆ ನಡೆಸಲಿದೆ.
ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಕಾಲೇಜು ಆರಂಭ ದಿನದಿಂದಲೇ ಪದವಿ ತರಗತಿಗಳ ಪರೀಕ್ಷೆ ನಡೆಸಲು ನಿರ್ಧರಿಸಿದ್ದು ಸಿದ್ದತೆ ನಡೆದಿದೆ. ಆದರೆ ವಿದ್ಯಾರ್ಥಿಗಳು ಈ ಪರೀಕ್ಷೆಯ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.
ಶ್ರೀ ಕೃಷ್ಣದೇವರಾಯ ವಿವಿ ಪದವಿ ತರಗತಿಗಳಿಗೆ ಪರೀಕ್ಷೆ ನಡೆಸಲು ಸಿದ್ಧತೆ ಸೋಮವಾರದಿಂದ ಪದವಿಯ 1, 3 ಹಾಗು 5ನೆಯ ಸೆಮಿಸ್ಟರ್ ಪರೀಕ್ಷೆ ನಡೆಸಲು ಈಗಾಗಲೇ ಕಾಲೇಜುಗಳಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಈ ತರಗತಿಗಳ ಪರೀಕ್ಷೆಗೆ ಇನ್ನೂ ಕಾಲಾವಕಾಶ ನೀಡಬೇಕಿತ್ತು. ಏಕೆಂದರೆ ಕಳೆದ ಮಾರ್ಚ್ ತಿಂಗಳನಿಂದಲೇ ಕಾಲೇಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕೇವಲ 2, 4 ಹಾಗು 6 ನೆಯ ಸೆಮಿಸ್ಟರ್ಗಳಿಗೆ ಆನ್ಲೈನ್ ತರಗತಿ ಮಾಡಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮಾಡಿದ ಪಾಠಗಳನ್ನು ಬಹುತೇಕ ವಿದ್ಯಾರ್ಥಿಗಳು ಮರೆತಿದ್ದಾರೆ. ಈಗ ಪರೀಕ್ಷೆ ನಡೆಸಿದರೆ ಪಾಸಾಗುವುದು ಕಷ್ಟ ಎನ್ನುತ್ತಾರೆ ವಿದ್ಯಾರ್ಥಿಗಳು.
ಪರೀಕ್ಷೆ ಬರೆಯಲು ಬರುವವರು ಹಾಲ್ ಟಿಕೆಟ್ನೊಂದಿಗೆ ವ್ಯಾಕ್ಸಿನ್ ಹಾಕಿಸಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ತರಬೇಕು. ಪ್ರಮಾಣ ಪತ್ರ ತಂದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಆದರೆ ಕಾಲೇಜುಗಳ ಮಾಹಿತಿ ಪ್ರಕಾರ ಶೇ 75 ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇನ್ನೂ ಶೇಕಡಾ 25 ರಷ್ಟು ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿಲ್ಲ. ಹೀಗಾಗಿ ಇವರು ಪರೀಕ್ಷೆಯಿಂದ ವಂಚಿತವಾಗುವ ಸಾಧ್ಯತೆ ಇದೆ. ಈಗ ಪೂರ್ವ ಸಿದ್ದತೆ ಮಾಡಿಕೊಳ್ಳದೆ ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಪರೀಕ್ಷೆ ನಡೆಸುತ್ತಿರುವುದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.