ಕೊಪ್ಪಳ: "ತಲೆಯಲ್ಲಿ ಸದ್ವಿಚಾರಗಳಿರಲಿ, ಬಾಯಲ್ಲಿ ಮಧುರವಾದ ಮಾತುಗಳಿರಲಿ, ಕೈಯಲ್ಲಿ ಒಳ್ಳೆಯ ಕೆಲಸವಿರಲಿ, ಮನದಲ್ಲಿ ಭಗವಂತನಿರಲಿ"... ಇದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಈ ಬಾರಿ ಜಾತ್ರೆಯಲ್ಲಿ ನೀಡಿರುವ ದಿವ್ಯ ಸಂದೇಶ.
ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಬೆಳಗ್ಗೆ ನಡೆದ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಬಳಿಕ ನೆರೆದಿದ್ದ ಭಕ್ತರಿಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಚನ ನೀಡಿದರು. ನಾವು ಪರಿಸರ ಸ್ನೇಹಿ ಜಾತ್ರೆಯನ್ನು ಮಾಡಬೇಕಿದೆ. ಜಾತ್ರೆ ನಡೆಯುತ್ತೋ, ಇಲ್ಲವೋ ಎಂದು ಭಕ್ತರು ಕೇಳುತ್ತಿದ್ದರು. ಗವಿಸಿದ್ದೇಶ್ವರರ ಜಾತ್ರೆ ಅಂದ್ರೆ ಅದು ಭಕ್ತರ ಭಕ್ತಿಯ ಶಕ್ತಿ ಹಾಗೂ ದೈವಿ ಶಕ್ತಿಯ ಸಂಗಮ. ಇವೆರಡೂ ದಿವ್ಯ ಶಕ್ತಿಯನ್ನು ತಡೆಯುತ್ತೇನೆ, ನಿಲ್ಲಿಸುತ್ತೇನೆ ಎನ್ನಲು ನಾನ್ಯಾರು? ಜಾತ್ರೆಯನ್ನು ನಡೆಸುತ್ತೇನೆ ಎಂದರೆ ಅದು ಅಹಂಕಾರವಾದೀತು ಎಂದರು.
ನಿಮ್ಮಂತೆ ನಾನು ಸಹ ಒಬ್ಬ ಭಕ್ತನಾಗಿ ಜಾತ್ರೆಯನ್ನು ನೋಡುತ್ತೇನೆ ಹೊರತು ಸನ್ಯಾಸಿಯಾಗಿಯಲ್ಲ. ಗವಿಸಿದ್ದನ ಪ್ರೇರಣೆ ಏನಿದೆಯೋ ಅದು ನಡೆಯುತ್ತದೆ. ಮೂರು ದಿನಗಳ ಕಾಲ ಜಾತ್ರೆಯಲ್ಲಿ ಸಾಮಾಜಿಕ ಚಿಂತನೆಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಕೊರೊನಾದಿಂದ ಈ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಆದರೆ ಮಹತ್ವದ ಮೂರು ಸಮಾಜಿಕ ಕೆಲಸಕ್ಕೆ ಕೈ ಹಾಕಿದ್ದೇವೆ ಎಂದರು.
ಈ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿಟಲ್ ಲೈಬ್ರರಿ ಆರಂಭ, ಸ್ಮಾರ್ಟ್ ಸಿಟಿಯಂತೆ ಸ್ಮಾರ್ಟ್ ವಿಲೇಜ್ ಮಾಡಲು ಕುಕನೂರು ತಾಲೂಕಿನ ಅಡವಿಹಳ್ಳಿಯನ್ನು ದತ್ತು ಪಡೆಯಲಾಗಿದೆ. ಗಿಣಗೇರಿ ಕೆರೆಯನ್ನು ಸ್ವಚ್ಛಗೊಳಿಸಿ ಸಂರಕ್ಷಣೆಯ ಜೊತೆಗೆ ಸಂವರ್ಧನೆ ಮಾಡಲಾಗುತ್ತದೆ. ಸರಳ ಜಾತ್ರೆ ಆಚರಣೆ ಸಮಾಜಮುಖಿ ಸೇವೆಗೆ ಅರ್ಪಣೆ ಎಂಬ ಘೋಷವಾಕ್ಯದೊಂದಿಗೆ ಈ ಸಮಾಜಿಕ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದರು.
ಜಾತ್ರೆ ಅಂದ್ರೆ ಕೇವಲ ತೇರು ಎಳೆಯುವುದು, ಪ್ರಸಾದ ಬಡಿಸುವುದು ಮಾತ್ರವಲ್ಲ. ಇಡೀ ನಾಡಿನ ಮಕ್ಕಳೆಲ್ಲರೂ ಸಮೃದ್ಧವಾಗಿ, ಸಂತೋಷವಾಗಿ, ಆರೋಗ್ಯವಾಗಿ ಇರಬೇಕು. ಜನರ ಆರೋಗ್ಯಕ್ಕಿಂತ ದೊಡ್ಡದೇನೂ ಇಲ್ಲ ಎಂದು ಶ್ರೀಗಳು ಸಂದೇಶ ನೀಡಿದರು.