ಗಂಗಾವತಿ (ಕೊಪ್ಪಳ): ಗಂಟಲಿನಲ್ಲಿ ಆಹಾರ ಸಿಲುಕಿ ಉಸಿರುಗಟ್ಟಿ ವಿಶೇಷ ಚೇತನ ಬಾಲಕ ಸಾವನ್ನಪ್ಪಿರುವ ಘಟನೆ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಇಲ್ಲಿನ ನಿವಾಸಿಗಳಾದ ರುದ್ರಮ್ಮ-ನಿರುಪಾದಿ ದಂಪತಿಯ ಪುತ್ರ ಆಂಜನೇಯ (14) ಎಂದು ಗುರುತಿಸಲಾಗಿದೆ. ಬಾಲಕ ಸಾವನ್ನಪ್ಪಿದ ಎರಡು ಗಂಟೆಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ.
ತೋಟದ ಮನೆಯಲ್ಲಿ ಈ ಕುಟುಂಬ ವಾಸವಿದೆ. ಎಂದಿನಂತೆ ತಾಯಿ ರುದ್ರಮ್ಮ ಮಗನಿಗೆ ತಟ್ಟೆಯಲ್ಲಿ ಊಟ ಹಾಕಿಕೊಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಬಾಲಕ ಊಟ ಮಾಡುವಾಗ ಆಹಾರ ಗಂಟಲಿನಲ್ಲಿ ಸಿಲುಕಿದೆ. ವಿಶೇಷ ಚೇತನನಾಗಿದ್ದರಿಂದ ತಕ್ಷಣ ನೀರು ಕುಡಿಯಬೇಕೆಂಬ ಅರಿವಿಲ್ಲದೇ, ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕನಕಗಿರಿ ಪೊಲೀಸ್ ಠಾಣೆಯಲ್ಲಿ ತಾಯಿ ನೀಡಿದ ದೂರಿನ ಮೆರೆಗೆ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕನಕಗಿರಿ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ:Belagavi crime: ಕೌಟುಂಬಿಕ ಕಲಹದಿಂದ ಗಾಯಗೊಂಡಿದ್ದ ಅತ್ತೆ ಸಾವು.. ಸೊಸೆ ವಿರುದ್ಧ ಕೊಲೆ ಕೇಸ್ ದಾಖಲು
ಮೆಂಥೋಪ್ಲಸ್ ಡಬ್ಬಿ ನುಂಗಿ ಮಗು ಸಾವು:ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿನೋವು ನಿವಾರಕ ಮೆಂಥೋಪ್ಲಸ್ ಸಣ್ಣ ಡಬ್ಬಿಯನ್ನು ನುಂಗಿ 9 ತಿಂಗಳು ಮಗು ಮೃತಪಟ್ಟಿದ್ದ ಘಟನೆ ಜೂ.10ರಂದು ನಡೆದಿತ್ತು. ಪಟ್ಟಣದ 5ನೇ ವಾರ್ಡ್ನ ಇಂದಿರಾ ನಗರದ ನಿವಾಸಿಗಳಾದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಪುತ್ರಿ 'ಪ್ರಿಯದರ್ಶಿನಿ' ಮನೆಯಲ್ಲಿ ಆಟವಾಡುತ್ತಿರುವಾಗ ಮೆಂಥೋಪ್ಲಸ್ ಡಬ್ಬಿ ನುಂಗಿದ್ದಾಳೆ. ಆಕೆ ಅಳುತ್ತಾ ಬಂದಾಗ ತಾಯಿ ತುಳಸಿ ಅವರು ಗಂಟಲಲ್ಲಿ ಸಿಲುಕಿದ್ದ ಡಬ್ಬಿಯನ್ನು ತೆಗೆಯಲು ಪ್ರಯತ್ನಿಸಿದ್ದಾರೆ.
ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ತಕ್ಷಣವೇ ವೈದ್ಯರ ಬಳಿ ಮಗುವನ್ನು ಕರೆದೊಯ್ಯಲಾಗಿದೆ. ಆದರೆ, ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿತ್ತು. ಆದರೂ ಪಾಲಕರು ಕೋರಿದಾಗ, ಗಂಟಲಲ್ಲಿದ್ದ ಡಬ್ಬಿ ಹೊರ ತೆಗೆಯಲಾಯಿತು ಎಂದು ಮಕ್ಕಳ ವೈದ್ಯರು ತಿಳಿಸಿದ್ದಾರೆ. ಮುತ್ಯಾಲ ರಾಘವೇಂದ್ರ ಹಾಗೂ ತುಳಸಿ ಮದುವೆಯಾಗಿ 10 ವರ್ಷಗಳ ಬಳಿಕ ಈ ಮಗು ಜನಿಸಿತ್ತು ಎಂಬ ಕುಟುಂಬಸ್ಥರು ತಿಳಿಸಿದ್ದರು. ಈಗ ಅದೇ ಮಗು ಮೆಂಥೋಪ್ಲಸ್ ಡಬ್ಬಿ ನುಂಗಿ ಪ್ರಾಣ ಕಳೆದುಕೊಂಡಿದೆ.
ಆ್ಯಸಿಡ್ ಕುಡಿದು ಮಗು ಸಾವು:ಮನೆಯ ಹೊರಗಡೆ ಆಟ ಆಡುತ್ತಿದ್ದ ಒಂದು ವರ್ಷದ ಹೆಣ್ಣು ಮಗು ಆ್ಯಸಿಡ್ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ಸೂರತ್ನ ಲಿಂಬಾಯತ್ ಎಂಬಲ್ಲಿ ಇತ್ತೀಚೆಗೆ ನಡೆದಿತ್ತು. ಮೃತ ಮಗುವನ್ನು ಅಮಿನಾ ಶಾಹಿದ್ ಮನ್ಸೂರಿ (1) ಎಂದು ಗುರುತಿಸಲಾಗಿತ್ತು. ಮಾರ್ಚ್ 30ರ ಗುರುವಾರ ಸಂಜೆ 7.30 ಸುಮಾರಿಗೆ ಘಟನೆ ನಡೆದಿತ್ತು. ಮಗುವಿನ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮಗು ಮನೆಯ ಹೊರಗಡೆ ಆಟ ಆಡುತ್ತಿತ್ತು. ಆಟ ಆಡುತ್ತಲೇ ಹೊರಗಿದ್ದ ಸ್ನಾನಗೃಹಕ್ಕೆ ತೆರಳಿದ್ದು, ಅಲ್ಲಿದ್ದ ಬಾಟಲಿಯ ಮುಚ್ಚಳ ತೆಗೆದು ಆ್ಯಸಿಡ್ ಕುಡಿದಿತ್ತು. ಜೋರಾಗಿ ಅಳಲಾರಂಭಿಸಿದೆ. ತಕ್ಷಣ ಓಡಿ ಬಂದ ತಾಯಿ ಮಗುವನ್ನು ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಆರೋಗ್ಯ ತೀರಾ ಹದಗೆಟ್ಟಿತ್ತು. ವೈದ್ಯರು ಮಗುವಿನ ಪ್ರಾಣ ಉಳಿಸಲು ಎಷ್ಟೇ ಪ್ರಯತ್ನಪಟ್ಟರೂ ಏಪ್ರಿಲ್ 4 ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿತ್ತು.