ಕೊಪ್ಪಳ:ಡೊಳ್ಳು ಹೊಟ್ಟೆ ಗಣಪತಿಗೆ ಅದೇನೆ ಅಲಂಕಾರ ಮಾಡಿದರೂ ಚೆಂದ. ತಮ್ಮ ಭಕ್ತಿ ತೋರ್ಪಡಿಸಲು ಪಾರ್ವತಿಸುತನನ್ನ ಅದೆಷ್ಟು ವೇಷ-ಭೂಷಣಗಳಲ್ಲಿ ಕಾಣೋಕೆ ಇಷ್ಟಪಡ್ತಾರೆ. ಅದರಲ್ಲೂ ಪ್ರಚಲಿತ ವಿದ್ಯಮಾನಗಳು ಮತ್ತು ಟ್ರೆಂಡ್‌ಗೆ ತಕ್ಕಂತೆ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಸಲಾಗುತ್ತೆ. ಕೊಪ್ಪಳದಲ್ಲಂತೂ ಪ್ರತಿಷ್ಠಾಪಿಸಲಾಗುವ ಗಣೇಶಮೂರ್ತಿಗಳನ್ನ ನೋಡೋದೆ ಒಂದು ಸೊಬಗು.
ಕಣ್ಮನ ಸೆಳೆಯುತ್ತಿರುವ ಕೊಪ್ಪಳದ ಗಣೇಶ ಮೂರ್ತಿಗಳು.. ಸ್ವಾತಂತ್ರ್ಯ ಚಳವಳಿ ಗಟ್ಟಿಗೊಳಿಸಲು ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಈಗ ವಿವಿಧ ರೂಪ ಪಡೆದಿದೆ. ಕೊಪ್ಪಳದಲ್ಲಂತೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು ವೈಶಿಷ್ಟ್ಯತೆಗಳಿಂದ ಆದ್ಯತೆ ನೀಡ್ತಾರೆ.ಪ್ರತಿವರ್ಷಕ್ಕಿಂತಲೂ ಈ ಸಾರಿ ಕೆಲ ಗಣೇಶ ಮೂರ್ತಿಗಳು ವಿಶೇಷವೆನಿಸುತ್ತಿವೆ. ಕೋಟೆ ಪ್ರದೇಶ, ವಾರಕಾರ ಓಣಿ ಹಾಗೂ ನಗರದ ಜವಾಹರ ರಸ್ತೆಯಲ್ಲಿ ವಿಶಿಷ್ಟವಾಗಿ ಗಣಪತಿಯನ್ನ ಕೂರಿಸಿದ್ದಾರೆ.
ವಾರಕಾರ ಓಣಿಯಲ್ಲಿ ಗಣೇಶಮೂರ್ತಿ ಇಸ್ರೋದ ರಾಕೆಟ್ ಚಂದ್ರಯಾನ-2 ಮಾದರಿ ರೂಪಿಸಲಾಗಿದೆ. ಅತ್ತ ಜವಾಹರ ರಸ್ತೆಯಲ್ಲಿ ಮೇದಾರ ಕೇತೇಶ್ವರ ಯುವಕ ಸಂಘ ಗಣೇಶಮೂರ್ತಿ ನೋಡುಗರ ಗಮನ ಸೆಳೆಯುತ್ತಿದೆ. ಐತಿಹಾಸಿಕ ಕೊಪ್ಪಳದ ಕೋಟೆ ಮಾದರಿಯನ್ನ ರೂಪಿಸಲಾಗಿದೆ. ಕೋಟೆಯೊಳಗೆ ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವನೆ ಇಲ್ಲಿಗೆ ಹೋದವರಿಗೆ ಆಗುತ್ತದೆ.
ಇವೆರಡಕ್ಕಿಂತ ಭಿನ್ನವಾಗಿ ಗಮನ ಸೆಳೆಯುತ್ತಿರೋದು ಕೋಟೆ ಪ್ರದೇಶದ ಗಣೇಶ ಮೂರ್ತಿ. ಶ್ರೀ ವಿನಾಯಕ ಮಿತ್ರಮಂಡಳಿ ಸ್ಥಾಪನೆ ಮಾಡಿರುವ ಗಣೇಶ ವಿಭಿನ್ನತೆಯಿಂದ ಕೂಡಿದೆ. ಗ್ರಾಮೀಣ ಸೊಗಡಿನ ಪರಿಸರದಲ್ಲಿ ಬೆಣ್ಣೆ ಕದಿಯುವ ಕೃಷ್ಣನನ್ನು ಯಶೋಧೆ ಕಂಬಕ್ಕೆ ಕಟ್ಟಿರುವುದನ್ನ ಕಣ್ಣಿಗೆ ಮುದ ನೀಡುತ್ತೆ. ಇದು ಜನರನ್ನು ಆಕರ್ಷಿಸುತ್ತಿದೆ ಎನ್ನುತ್ತಾರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ನಿತೇಶ್ ಪುಲಸ್ಕರ್. ಗಣೇಶ ಹಬ್ಬದಲ್ಲಿ ಕೊಪ್ಪಳ ಈಗ ಕಂಗೊಳಿಸುತ್ತಿರೋದಂತೂ ನಿಜ.