ಗಂಗಾವತಿ (ಕೊಪ್ಪಳ):ಕಾನೂನು ಸುವ್ಯವಸ್ಥೆಗೆ ಭಂಗ, ಶಾಂತಿ ಕದಡುತ್ತಿರುವ ಆರೋಪದ ಮೇರೆಗೆ ರಾಜ್ಯದಾದ್ಯಂತ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆ ಮುಖಂಡರ ಮನೆಯ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಗಂಗಾವತಿಯಲ್ಲೂ ಕೊಪ್ಪಳ ಜಿಲ್ಲಾ ಎಸ್ಪಿ ಅರುಣಂಗ್ಶು ಗಿರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಮೂವರು ಯುವಕರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪೈಕಿ ಒಬ್ಬನನ್ನು ಬಿಟ್ಟು ಕಳುಹಿಸಲಾಗಿದ್ದು, ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಿಎಫ್ಐ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಸರ್ಪರಾಜ್ ಹುಸೇನ್ ಮತ್ತು ಕೊಪ್ಪಳ ಜಿಲ್ಲಾ ಮುಖ್ಯ ಸಂಚಾಲಕ ರಸೂಲ್ ಮೊಹಮ್ಮದ್ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಎಸ್ಪಿ ಅಧಿಕೃತ ಮಾಹಿತಿ ನೀಡಿದ್ದಾರೆ.