ಕೊಪ್ಪಳ: ತಾಯಿ ಇಲ್ಲದ ತಬ್ಬಲಿಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಬದುಕಿರುವ ತಾಯಿಯನ್ನೆ ದೂರದ ಊರಿಗೆ ಕರೆತಂದು ಬಿಟ್ಟು ಆಕೆಯನ್ನೆ ತಬ್ಬಲಿ ಮಾಡಿ ಹೋಗಿರುವ ಅಮಾನವೀಯ ಘಟನೆ ಜರುಗಿದೆ. ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕಳೆದೆರಡು ದಿನದ ಹಿಂದೆ ತಾಯಿಯೊಂದಿಗೆ ಬಂದಿದ್ದ ಪುತ್ರನೋರ್ವ ಆಕೆಯನ್ನು ದೇವಸ್ಥಾನದ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ.
ಆಕೆ ಸುಮಾರು 80 ವರ್ಷಗಳ ಆಸುಪಾಸಿನ ವೃದ್ಧೆ, ತನ್ನ ಹೆಸರು ಖಾಸೀಂ ಬಿ., ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾಳೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ಇನ್ನು ದೊರಕಿಲ್ಲ. ಎರಡು ದಿನದ ಹಿಂದೆ ಇಲ್ಲಿಗೆ ಕರೆತಂದ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ಇಲ್ಲಿಂದ ತೆರಳಿದ್ದಾನೆ ಎನ್ನಲಾಗಿದೆ.