ಶಿರಹಟ್ಟಿ(ಅಥಣಿ): ಪ್ರತಿ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಶುದ್ಧ ಕುಡಿಯುವ ನೀರು ಕೋಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 'ಜಲ ಜೀವನ್ ಮಿಷನ್' ಯೋಜನೆ ಅನುಷ್ಠಾನಕ್ಕೆ ತಂದಿದ್ದರು. ಆದರೆ, ಆ ಯೋಜನೆಯಡಿ ಕಾಮಗಾರಿ ಮುಗಿಸಿ ಆರು ವರ್ಷಗಳೇ ಕಳೆದರು ನಲ್ಲಿಯಲ್ಲಿ ನೀರು ಬರದೇ ಜನ ಹಿಡಿಶಾಪ ಹಾಕುವಂತಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಮನೆ ಮನೆಗಳ ಮುಂದೆ ನಲ್ಲಿಗಳಿಗೆ ಮೀಟರ್ ಅಳವಡಿಸಿದ್ದಾರೆ. ಆರು ವರ್ಷ ಕಳೆದ ಕಾರಣ ಅವು ಕೂಡ ಕೆಟ್ಟು ಹೋಗಿದ್ದು, ನಲ್ಲಿಯಲ್ಲಿ ಒಂದು ತೊಟ್ಟು ಕೂಡ ನೀರು ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಳ್ಳ ಹಿಡಿದ ಜಲಜೀವನ್ ಮಿಷನ್ ಯೋಜನೆ.. ನೀರು ಬರದೇ ಸ್ಥಳೀಯರು ಹೈರಾಣ.. ಗ್ರಾಮದಲ್ಲಿ ಜಲ್ ಜೀವನ ಮಿಷನ್ ಆರಂಭಿಸಿ 1 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಈ ಯೋಜನೆಗೆ ಶೇ. 50ರಷ್ಟು ರಾಜ್ಯ ಸರ್ಕಾರ, ಶೇ. 40ರಷ್ಟು ಗ್ರಾಮ ಪಂಚಾಯತ್, ಶೇ.10ರಷ್ಟು ಗ್ರಾಮಸ್ಥರು ವೆಚ್ಚದಲ್ಲಿ ಟ್ಯಾಂಕ್ ನಿರ್ಮಾಣವಾಗಿದೆ. ಆದರೂ ನೀರು ಹೊತ್ತು ತರುವ ಬವಣೆ ಮುಗಿದಿಲ್ಲ ಅಂತಾರೆ ಗ್ರಾಮಸ್ಥರು. ಚುನಾವಣೆ ಸಮಯದಲ್ಲಿ ಪೊಳ್ಳು ಭರವಸೆ ನೀಡುತ್ತಾರೆ. ಆದರೆ, ಈಡೇರಿಸುವುದಿಲ್ಲ ಎಂಬುವುದು ಗ್ರಾಮಸ್ಥರ ಅಳಲು.
ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಕುಡಿಸುವ ಉದ್ದೇಶವಿಟ್ಟುಕೊಂಡು ಈ ಯೋಜನೆಯನ್ನ ಅನುಷ್ಠಾನಕ್ಕೆ ತಂದು ಆರು ವರ್ಷಗಳಾಗುತ್ತ ಬಂದರೂ ಗ್ರಾಮದ ಜನರಿಗೆ ನೀರು ಸಿಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಪ್ರತಿ ಮನೆಗೆ ನೀರು ಒದಗಿಸಿ ಜನರ ದಾಹ ನೀಗಿಸಬೇಕಿದೆ.
ಇದನ್ನೂ ಓದಿ:ಶಾಲೆಗಳಿಗೆ ಬಾಂಬ್ ಬೆದರಿಕೆ.. ಇ-ಮೇಲ್ ಪೋರ್ಟಲ್ ವಿದೇಶದಲ್ಲಿರುವ ಕಾರಣ ಮಾಹಿತಿ ವಿಳಂಬ : ಪೊಲೀಸ್ ಆಯುಕ್ತ ಪಂತ್