ಕೊಪ್ಪಳ:ದೇಶದಲ್ಲೇ ಮೊದಲ ಅಂತಾರಾಷ್ಟ್ರೀಯ ಯೋಗ ವಿಶ್ವವಿದ್ಯಾಲಯವನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಉದ್ದೇಶವಿದ್ದು, ಅಗತ್ಯ ಸ್ಥಳ ಪರಿಶೀಲನೆ ನಡೆದಿದೆ.
ಇದಕ್ಕಾಗಿಯೇ ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಅಧಿಕಾರಿಗಳು ಜಿಲ್ಲೆಯ ಗಂಗಾವತಿ ತಾಲೂಕಿನ ಹಲವು ಕಡೆ ಸ್ಥಳ ಪರಿಶೀಲನೆ ನಡೆಸಿದರು. ಗಂಗಾವತಿ ತಾಲೂಕಿನ ಆನೆಗುಂದಿ, ರಂಗಾಪುರ, ಹನುಮನಹಳ್ಳಿ, ಸಣಾಪುರ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಅಂತಾರಾಷ್ಟ್ರೀಯ ಯೋಗ ವಿವಿ ಸ್ಥಾಪನೆಗೆ ಸ್ಥಳ ಪರಿಶೀಲನೆ ಈಗಾಗಲೇ ಕೇಂದ್ರ ಆಯ್ಯುಷ್ ಸಚಿವರಾದ ಶ್ರೀಪಾದ ಯಸ್ಸೊ ಅವರ ಜೊತೆ ಒಂದು ಸುತ್ತಿನ ಚರ್ಚೆ ನೆಡಸಲಾಗಿದ್ದು, ಸ್ಥಳ ಪರಿಶೀಲನೆ ನಂತರ ಇನ್ನೊಂದು ಬಾರಿ ಕೇಂದ್ರ ತಂಡದ ಜೊತೆ ಆಗಮಿಸಿ ಸ್ಥಳ ಫೈನಲ್ ಆಗಲಿದೆ. ಯೋಗ ವಿವಿ ಈ ಭಾಗದಲ್ಲಿ ಸ್ಥಾಪಿಸಲು ಮುಖ್ಯ ಕಾರಣವೆಂದರೆ ಇದು ವಿಶ್ವ ವಿಖ್ಯಾತ ಹಂಪಿಗೆ ಸಮೀಪದ ಸ್ಥಳವಾಗಿದ್ದು, ಇದರ ಜೊತೆಗೆ ಇಲ್ಲಿ ದಟ್ಟವಾದ ಗುಡ್ಡಗಾಡು ಮತ್ತು ತುಂಗಭದ್ರಾ ನದಿಯೂ ಸಹ ಪಕ್ಕದಲ್ಲೆ ಹರಿಯುತ್ತದೆ. ಯೋಗಕ್ಕೆ ಪ್ರಶಸ್ತ ಸ್ಥಳವಾಗಿದೆ. ಹೀಗಾಗಿ ಇಲ್ಲಿ ಸ್ಥಳ ಪರಿಶೀಲಿಸಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಈಗ ಪರಿಶೀಲಿಸಲಾಗಿರುವ ಸ್ಥಳದಲ್ಲಿ ಒಟ್ಟು 340 ಎಕರೆ ಸರ್ಕಾರಿ ಭೂಮಿ ಹಾಗೂ 200 ಎಕರೆ ಅರಣ್ಯ ಪ್ರದೇಶವಿದೆ. ಯೋಗ ವಿವಿಗೆ 200 ಎಕರೆ ಪ್ರದೇಶ ಬೇಕಾಗಿದ್ದು, ಮೊದಲ ಹಂತದಲ್ಲಿ 100 ಎಕರೆ ಪ್ರದೇಶವನ್ನು ಗುರುತಿಸಲು ತಿರ್ಮಾನಿಸಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಹನುಮ ಹುಟ್ಟಿದ ನಾಡಲ್ಲಿ ದೇಶದ ಮೊದಲ ಅಂತಾರಾಷ್ಟ್ರೀಯ ಯೋಗ ವಿಶ್ವವಿದ್ಯಾಲಯ ಪ್ರಾರಂಭವಾಗಲಿದೆ.