ಕೊಪ್ಪಳ:ಕೊರೊನಾ ಹಿನ್ನೆಲೆ ಈ ಬಾರಿ ಹೇಮಗುಡ್ಡ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಮೈಸೂರು ಮಾದರಿಯ ಹೇಮಗುಡ್ಡದ ದಸರಾ ವೈಭವ ಈ ಭಾಗದ ಜನರಿಗೆ ಮಿಸ್ ಆದಂತಾಗಿದೆ.
ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಮಾಜಿ ಸಂಸದ ಹೆಚ್ ಜಿ ರಾಮುಲು ಅವರ ಕುಟುಂಬದಿಂದ ಕಳೆದ 34 ವರ್ಷಗಳಿಂದ ಪ್ರತಿ ವರ್ಷ ದಸರಾವನ್ನು ಅತ್ಯಂತ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಹೇಮಗುಡ್ಡದಲ್ಲಿ ಈ ಬಾರಿ ಸರಳ ದಸರಾ ಆನೆಯ ಮೇಲೆ ಅಂಬಾರಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಾತೆಯ ಮೆರವಣಿಗೆ, ಸಾಮೂಹಿಕ ವಿವಾಹಗಳು ಸೇರಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮೈಸೂರು ದಸರಾ ಮಾದರಿಯಲ್ಲಿ ಆಚರಿಸಲಾಗುತ್ತಿದ್ದ ಹೇಮಗುಡ್ಡದ ದಸರಾ ಆಚರಣೆಯನ್ನು ಕೊಪ್ಪಳ ಜಿಲ್ಲೆಯ ಮೈಸೂರು ದಸರಾ ಎಂದು ಜನರು ಬಣ್ಣಿಸಿ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿಯಿಂದಾಗಿ ಹೇಮಗುಡ್ಡದಲ್ಲಿಯೂ ಸರಳವಾಗಿ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದೆ.
ಶ್ರೀದೇವಿಯ ಪುರಾಣ ಪಠಣ, ಪೂಜೆ ಪುನಸ್ಕಾರ ಸೇರಿ ಮುಂಜಾಗ್ರಾತಾ ಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಅಂಬಾರಿ ಮೆರವಣಿಗೆ, ಸಾಮೂಹಿಕ ವಿವಾಹ ಸೇರಿ ಇನ್ನಿತರೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಹೇಮಗುಡ್ಡದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಖ್ಯಸ್ಥರಾದ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್ ಆರ್ ಶ್ರೀನಾಥ್ ತಿಳಿಸಿದ್ದಾರೆ.
ದೇವಾಲಯದ ಇತಿಹಾಸ :ಹೇಮಗುಡ್ಡ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಸ್ಥಳವಾಗಿದೆ. ಇತಿಹಾಸದಲ್ಲಿ ಪರನಾರಿ ಸಹೋದರ ಎಂದು ಬಣ್ಣಿತವಾಗಿರುವ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗದ ಪ್ರದೇಶವಿದು. ಮೈಸೂರು ದಸಾರ ಆಚರಣೆ ಆರಂಭವಾಗುವುದಕ್ಕಿಂತಲೂ ಮೊದಲು ದಸರಾ ಆಚರಣೆ ಇಲ್ಲಿ ಪ್ರಾರಂಭವಾಯಿತು. ಕುಮ್ಮಟದುರ್ಗದ ಬಳಿಕ ವಿಜಯನಗರ ಸಾಮ್ರಾಜ್ಯದಲ್ಲಿ ವೈಭವೋಪೇತವಾಗಿ ಆಚರಣೆ ಮಾಡಲಾಗುತ್ತಿತ್ತು. ಬಳಿಕ ಪೆನಗೊಂಡ ನಂತರ ಮೈಸೂರಿಗೆ ದಸರಾ ಆಚರಣೆ ಶಿಫ್ಟ್ ಆಯಿತು ಎನ್ನುತ್ತದೆ ಇತಿಹಾಸ.
ಇದಲ್ಲದೆ ರಾಮಾಯಣದ ಕಾಲದಲ್ಲಿ ಶ್ರೀರಾಮನು ಹೇಮಗುಡ್ಡದಲ್ಲಿ ಶ್ರೀದೇವಿಯನ್ನು ಆರಾಧಿಸಿ ಬಳಿಕ ಕಿಷ್ಕಿಂಧೆಗೆ ಪ್ರಯಾಣ ಬೆಳೆಸಿದ್ದ ಎಂಬ ಪ್ರತೀತಿ ಇದೆ. ಹೀಗಾಗಿ, ಹೇಮಗುಡ್ಡದ ಶ್ರೀ ದುರ್ಗಾಪರಮೇಶ್ವರಿ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಕಳೆದ 34 ವರ್ಷಗಳಿಂದ ಮೈಸೂರು ದಸರಾ ಮಾದರಿಯಲ್ಲಿ ದಸರಾ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಈ ವರ್ಷ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.