ಕೊಪ್ಪಳ: ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾನೂನು ಜಾರಿಗೆ ತರಲಾಗಿದೆ. ನಾವು ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಬಿಜೆಪಿಯವರಿಗೆ ಇನ್ನು 10 ವರ್ಷ ಮಾಡಲು ಏನೂ ಕೆಲಸ ಇರುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ 25 ಜನ ಬಿಜೆಪಿ ಸಂಸದರು ಪ್ರಧಾನ ಮಂತ್ರಿ ಬಳಿ ಹೋಗಿ ರಾಜ್ಯದ ಬಡಜನರಿಗೆ ಅಕ್ಕಿ ಕೊಡಲು ಹೇಳುವುದು ಬಿಟ್ಟು, ಇಲ್ಲಿ ದಿನಕ್ಕೊಂದು ಸ್ಟ್ರೈಕ್ ಮಾಡುತ್ತಿದ್ದಾರೆ. ಮಾನ್ಯ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ನನಗೆ ಗೌರವವಿದೆ. ಇಲ್ಲಿ ಪ್ರತಿಭಟನೆ ಮಾಡಿ ಕಾಲ ಹರಣ ಮಾಡುವುದಕ್ಕಿಂತ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಿ ಬಡವರಿಗೆ ಅಕ್ಕಿ ನೀಡುವಂತೆ ಕೇಳಲಿ. ನಾವು ಬಡವರಿಗೆ ಅಕ್ಕಿ ಕೊಡುತ್ತೀರೋದು, ಕಾಂಗ್ರೆಸ್ ಕಾರ್ಯಕರ್ತರಿಗೆ ಅಲ್ಲ ಎಂದರು.
ಪ್ರಹ್ಲಾದ್ ಜೋಶಿಯವರಿಗೆ ನಾನು ಕೇಳ ಬಯಸುತ್ತೇನೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇವಿ ಅಂದ್ರು ಕೊಟ್ರಾ?. ಅಚ್ಚೆ ದಿನ್ ಆಯೇಗಾ ಅಂದ್ರು ಅಚ್ಚೆ ದಿನ್ ಬಂತಾ?. ರೈತರ ಆದಾಯ ಡಬಲ್ ಮಾಡುತ್ತೇವೆ ಅಂದ್ರು ಮಾಡಿದ್ರಾ?. ಪ್ರಹ್ಲಾದ್ ಜೋಶಿಯವರು ಕರ್ನಾಟಕದಿಂದ ಎಂಪಿಯಾಗಿ ಆಯ್ಕೆಯಾಗಿ ಹೋಗಿದ್ದಾರೆ. ಪ್ರಧಾನಿಗಳ ಪಕ್ಕದಲ್ಲಿಯೇ ಇರುತ್ತಾರಲ್ಲ. ಬಡವರ ಬಗ್ಗೆ ಪ್ರೀತಿ ವಿಶ್ವಾಸವಿದ್ದರೆ ಅಕ್ಕಿ ಕೊಡಲು ಯಾಕೆ ಕೇಳುತಿಲ್ಲ ಎಂದು ಪ್ರಶ್ನಿಸಿದರು. ನಾವು ರಾಜ್ಯದ ಜನರಿಗೆ ಐದು ಗ್ಯಾರಂಟಿ ಹೇಳಿದ್ದೇವಿ. ಆಗಸ್ಟ್ ತಿಂಗಳೊಳಗೆ ಐದೂ ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರಕ್ಕಿಂತಲೂ ನಾವು ಈಗ ಸಿರೀಯಸ್ ಆಗಿ ಕೆಲಸ ಮಾಡುತ್ತಿದ್ದೇವೆ ಎಂದರು.