ಕುಷ್ಟಗಿ (ಕೊಪ್ಪಳ):ಕುರಿಗಾಹಿಗಳು ಪ್ರತಿ ನಿತ್ಯ ಎದುರಿಸುತ್ತಿರುವ ಸಂಕಷ್ಟಗಳನ್ನು ಅರಿತುಕೊಳ್ಳಲು ಗ್ರಾ.ಪಂ. ಚುನಾವಣೆ ಬಳಿಕ ಕುರಿ ಹಟ್ಟಿ ವಾಸ್ತವ್ಯ ಮಾಡುವುದಾಗಿ ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ಭೀ. ತಳ್ಳೀಕೇರಿ ಹೇಳಿದರು.
ಕುರಿಗಾಹಿ ಸಮಸ್ಯೆ ಅರಿಯಲು ಕುರಿ ಹಟ್ಟಿಯಲ್ಲಿ ವಾಸ್ತವ್ಯ ಹೂಡುವೆ: ಶರಣು ತಳ್ಳೀಕೇರಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕುಷ್ಟಗಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕುರಿ ಹಟ್ಟಿ ವಾಸ್ಯವ್ಯದಿಂದ ಕುರಿಗಾಹಿಗಳ ಸಮಸ್ಯೆಗಳನ್ನು ಅರಿತು ನಿಗಮದಿಂದ ಸಮಸ್ಯೆ ಸರಿಪಡಿಸುವ ಕ್ರಮ ಕೈಗೊಳ್ಳಲು ಸಹಕಾರಿಯಾಗುವುದರಿಂದ ಕೆಲವೇ ದಿನಗಳಲ್ಲಿ ಕುರಿಹಟ್ಟಿ ವಾಸ್ತವ್ಯ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ 1.72 ಕೋಟಿ ಕುರಿ ಮೇಕೆಗಳಿವೆ. 15 ಲಕ್ಷ ಕುರಿಗಾಹಿ ಕುಟುಂಬಗಳಿವೆ. ಅವರ ಎಲ್ಲ ಸಮಸ್ಯೆ ಅರಿಯಲು ಈಗಾಗಲೇ ತೀರ್ಮಾನಿಸಿರುವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿರುವೆ. ನಿಗಮದ ಮೂಲಕ ಯೋಜನೆಗಳನ್ನು ಕುರಿಗಾಹಿಗಳಿಗೆ ತಲುಪಿಸುವುದು ಮೊದಲ ಆದ್ಯತೆಯಾಗಿದ್ದು, ಈ ಹಿಂದೆ ಕುರಿ, ಮೇಕೆ ಸಾಕಾಣಿಕೆ ಕುಲಕಸುಬು ಆಗಿತ್ತು. ತುಂಬಾ ಸಂತಸದ ವಿಚಾರ ಎಂದರೆ ಇದೀಗ ಇದು ಉದ್ಯಮವಾಗುತ್ತಿದೆ. ಸಾಫ್ಟವೇರ್ ಇಂಜಿನೀಯರ್, ಎಂಬಿಎ ಪದವೀಧರರ ಉದ್ಯಮದಲ್ಲಿ ಆಸಕ್ತಿ ತೋರಿಸುತ್ತಿದ್ದು, ವೈಜ್ಞಾನಿಕವಾಗಿ ಕುರಿ ಸಾಕಾಣಿಕೆಯತ್ತ ಒಲು ತೋರಿಸುತ್ತಿದ್ದು, ಯುವಕರು - ಯುವತಿಯರು ಆಸಕ್ತಿ ತೋರಿಸುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವ ರೀತಿ ನೆರವು ಸಿಗಲಿದೆ ಎನ್ನುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಕೆ.ಶರಣಪ್ಪ ಅವರ ಆಪೇಕ್ಷೆ ಮೇರೆಗೆ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರನ್ನಾಗಿ ನೇಮಕಗೊಂಡಿರುವೆ. ನನ್ನ ಮೇಲೆ ಯಾವ ಭರವಸೆ ಇಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಜವಾಬ್ದಾರಿ ನೀಡಿದ್ದು, ವಹಿಸಿದ ಜವಾಬ್ದಾರಿಗೆ ಕಿಂಚಿತ್ತು ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುವೆ ಎಂದರು.
ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿ ಮೊದಲ ಭೇಟಿ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸನ್ಮಾನಿಸಿದರು. ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿ ಗ್ರಾಮ ದೇವಿ ದುರ್ಗಾದೇವಿ, ಕಟ್ಟಿ ದುರಗಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.