ಗಂಗಾವತಿ (ಕೊಪ್ಪಳ): ಗ್ರಾಮದ ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಕುಡಿಯುವ ಹನಿ ನೀರಿಗೂ ಜನರು ಇಲ್ಲಿ ಪರದಾಡುತ್ತಿದ್ದಾರೆ. ಇಂಥ ಸನ್ನಿವೇಶ ಗಂಗಾವತಿ ತಾಲ್ಲೂಕಿನ ನದಿಪಾತ್ರದಲ್ಲಿನ ಹತ್ತಾರು ಗ್ರಾಮಗಳಲ್ಲಿ ಕಂಡುಬಂದಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಕಳೆದ ಹಲವು ವಾರಗಳಿಂದ ಸಮಸ್ಯೆಯಾಗಿದೆ. ನಾಲ್ಕು ದಿನ ಅಥವಾ ವಾರಕ್ಕೆ ಎರಡು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದ್ದು ಜನರಿಗೆ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ನಾಲ್ಕು ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವ ನೀರು ಹಿಡಿಯುವ ಉದ್ದೇಶಕ್ಕಾಗಿಯೇ ಜನ ಕೂಲಿ ಕೆಲಸ ಬಿಟ್ಟು ಮನೆಯಲ್ಲೇ ಇರಬೇಕಾದ ಸ್ಥಿತಿ ಇದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಅಲಕ್ಷ್ಯದಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಕೇವಲ ಸಂಗಾಪುರ ಮಾತ್ರವಲ್ಲ, ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶ್ರೀರಂಗದೇವರಾಯಲು ನಗರ, ಸಿಂಗನಗುಂಡು, ವಿಪ್ರ, ಬಂಡಿಬಸಪ್ಪ ಕ್ಯಾಂಪ್, ಗೂಗಿಬಂಡೆ, ರಾಮದುರ್ಗ ಸಾಯಿನಗರದಂತಹ ಗ್ರಾಮಗಳಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಇದೆ.
ಕಳೆದ ಹದಿನೈದು ವರ್ಷದ ಹಿಂದೆ ಮಾಡಲಾಗಿದ್ದ ಪೈಪ್ಲೈನ್ ಅಲ್ಲಲ್ಲಿ ಒಡೆದು ಹೋಗಿದ್ದು, ಪಂಚಾಯಿತಿ ಸಿಬ್ಬಂದಿ ಅವುಗಳನ್ನು ಬದಲಿಸದೇ ಕೇವಲ ಪ್ಯಾಚ್ ಕೆಲಸ ಮಾಡಿ ತಾತ್ಕಾಲಿಕ ಶಮನ ಮಾಡುತ್ತಿದ್ದಾರೆ. ಸಮಸ್ಯೆ ಮರುಕಳಿಸಿ ಅಪಾರ ಪ್ರಮಾಣದ ನೀರು ಪೈಪ್ ಮೂಲಕ ಹೊರ ಹೋಗುತ್ತಿದೆ. ಹೀಗಾಗಿ ಸಂಗಾಪುರ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.