ಕೊಪ್ಪಳ:ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಾಳೆಯಿಂದ 10 ದಿನಗಳ ಕಾಲ ಗಂಗಾವತಿ ನಗರ ಲಾಕ್ಡೌನ್ ಘೋಷಣೆಯ ಜೊತೆಗೆ ಜಿಲ್ಲೆಯ ಇನ್ನೂ ಒಂಭತ್ತು ಪ್ರದೇಶಗಳು ಸಹ ಲಾಕ್ಡೌನ್ ಆಗಲಿವೆ.
ಕೊಪ್ಪಳ ಜಿಲ್ಲೆಯ ಹಲವು ಪ್ರದೇಶಗಳು ಲಾಕ್ಡೌನ್ ಈ ಕುರಿತಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಸುದ್ದಿಗೋಷ್ಠಿ ನಡೆಸಿ, ಕೊರೊನಾ ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವತಿ ನಗರ, ಶ್ರೀರಾಮನಗರವನ್ನು ಲಾಕ್ ಡೌನ್ ಮಾಡುವ ಕುರಿತು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವರು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಇನ್ನೂ ಕೆಲ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವು ಸಹ ಲಾಕ್ ಡೌನ್ ಆಗಲಿವೆ ಎಂದರು.
ಮರ್ಲಾನಹಳ್ಳಿ, ಮುನಿರಾಬಾದ್, ಹಣವಾಳ, ಹುಲಗಿ, ಹಿರೇಸಿಂದೋಗಿ, ಕೊಪ್ಪಳಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಪಟ್ಟಣ, ಮಂಗಳೂರು, ಹೇರೂರು, ನವಲಹಳ್ಳಿ ಸೇರಿ ಒಟ್ಟು 11 ಪ್ರದೇಶಗಳನ್ನು ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಜುಲೈ 21 ರಾತ್ರಿ 8 ಗಂಟೆಯಿಂದ 10 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಆರೋಗ್ಯ, ಕೃಷಿ ಸಂಬಂಧಿತ, ಬ್ಯಾಂಕ್ಗಳ ಚಟುವಟಿಕೆ ಎಂದಿನಂತೆ ಇರಲಿವೆ. ಆದರೆ, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಆಯಾ ಸಂಸ್ಥೆಯವರ ಜವಾಬ್ದಾರಿ ಎಂದು ಹೇಳಿದರು.
ಗಂಗಾವತಿ ಮೂಲಕ ಚಲಿಸುವ ಎಲ್ಲ ಸಾರಿಗೆ ಸಂಸ್ಥೆಗಳ ಬಸ್ಗಳ ರೂಟ್ ಬದಲಾಯಿಸಲಾಗುತ್ತದೆ. ಈ ಕುರಿತಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಅವರಿಗೆ ಸೂಚನೆ ನೀಡಲಾಗಿದೆ. ಗೂಡ್ಸ್ ವೆಹಿಕಲ್ಸ್ ಓಡಾಟ ಇರುತ್ತದೆ. ಆದರೆ ಅನಗತ್ಯವಾಗಿ ಓಡಾಡುವ ಜನರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಲಾಕ್ ಡೌನ್ ಆಗುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. 4 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಅನಗತ್ಯವಾಗಿ ಓಡಾಡುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ತಿಳಿಸಿದರು.