ಗಂಗಾವತಿ: ಇಲ್ಲಿನ ಕೆಲ ಬ್ಯಾಂಕ್, ಪೋಸ್ಟ್ ಆಫೀಸ್, ಸರ್ಕಾರಿ ಕಚೇರಿ ಸೇರಿದಂತೆ ಇನ್ನಿತರ ಸೇವಾ ವಲಯದ ಕಾರ್ಯಾಲಯಗಳಲ್ಲಿ ಈಗ ಸರ್ವರ್ ಡೌನ್ ಎಂಬ ಸಿಂಡ್ರೊಮ್ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ. ಇದರಿಂದ ಸಾರ್ವಜನಿಕರು ಸಕಾಲಕ್ಕೆ ಸೇವೆ ಪಡೆದುಕೊಳ್ಳಲಾಗದೇ ಪರದಾಡುತ್ತಿದ್ದಾರೆ.
ವ್ಯಾಪಕವಾಗಿ ಹರುಡುತ್ತಿದೆ ಸರ್ವರ್ ಡೌನ್ ಸಿಂಡ್ರೊಮ್: ಜನ ಕಂಗಾಲು ಇಲ್ಲಿನ ಅಂಚೆ ಕಚೇರಿಯಲ್ಲಿ ವಿವಿಧ ಸೇವೆ ಪಡೆಯಲು ಜನ ಶುಕ್ರವಾರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸರ್ವರ್ ಡೌನ್ ಎಂಬ ಕಾರಣಕ್ಕೆ ಜನ ಎರಡು ಮೂರು ನಿಮಿಷ ಸೇವೆಗೂ ಗಂಟೆಗಳ ಕಾಲ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.
ಕಾಲೇಜು ವಿದ್ಯಾರ್ಥಿಗಳು ಶುಲ್ಕ ಪಾವತಿಸಲು, ಕೆಲವರು ಅಂಚೆಗಳನ್ನು ರಿಜಿಸ್ಟರ್ ಮಾಡಿಸಲು ಇನ್ನು ಕೆಲವರು ರೈಲ್ವೆ ಟಿಕೆಟ್ ಬುಕ್ ಮಾಡಲು ಹೀಗೆ ನಾನಾ ಸೇವೆ ಪಡೆಯಲು ಇಲ್ಲಿನ ಅಂಚೆ ಕಚೇರಿಯ ಮುಂದೆ ಗಂಟೆಗಟ್ಟಲೆ ಕಾಯ್ದು ಸುಸ್ತಾದರು.
ಈ ಬಗ್ಗೆ ಗ್ರಾಹಕರು ವಿಚಾರಿಸಿದರೆ ಸಿಬ್ಬಂದಿ ಸರ್ವರ್ ಡೌನ್ ಎಂಬ ಮಾಹಿತಿ ಸಿಗುತ್ತಿದೆ. ಬಹುತೇಕ ಸರ್ಕಾರಿ ಇಲಾಖೆಯ ಕಚೇರಿಗಳು (ವಿಪಿಎನ್) ಎಂಬ ವ್ಯವಸ್ಥೆಯಲ್ಲಿದೆ. ಬಳಕೆದಾರರು ಹೆಚ್ಚಾದಂತೆ ಇಲಾಖೆಯ ನೆಟ್ವರ್ಕ್ ಲೈನ್ ಕೂಡ ಸಹಜವಾಗಿ ಬ್ಯೂಸಿಯಾಗುತ್ತದೆ. ಹೀಗಾಗಿ ಸರ್ವರ್ ಬ್ಯುಸಿ ಎಂಬ ಸಂದೇಶ ಬರುತ್ತದೆ ಇದು ಸಹಜ ಎಂದು ದೂರವಾಣಿ ಇಲಾಖೆಯ ನೌಕರ ದತ್ತಾತ್ರೇಯ ತಿಳಿಸಿದ್ದಾರೆ.