ಕುಷ್ಟಗಿ(ಕೊಪ್ಪಳ):ಹಾಲಿ ಕ.ಸಾ.ಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್ಗೆ ದುಃಸ್ವಪ್ನವಾಗಿದ್ದಾರೆ. ಅವರು ಅಧಿಕಾರಾವಧಿಯನ್ನು 5 ವರ್ಷಕ್ಕೆ ವಿಸ್ತರಿಸಿದ್ದು, ಸರ್ಕಾರದ ಮುಲಾಜಿಗೆ ಒಳಗಾಗಿದ್ದಾರೆ. ಕ.ಸಾ.ಪ.ವನ್ನು ಸರ್ಕಾರಕ್ಕೆ ಒತ್ತೆ ಇಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ವಾಗ್ದಾಳಿ ನಡೆಸಿದರು.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಶತಮಾನದ ಸಂಭ್ರಮದ ಸಂಸ್ಥೆ. ಆದ್ರೀಗ ಕನ್ನಡ ಸಾಹಿತ್ಯ ಪರಿಷತ್ ಬೇರೆ-ಬೇರೆ ರೂಪ ಪಡೆಯುತ್ತಿದ್ದು, ಸಾಹಿತ್ಯ, ಭಾಷೆ ಬಿಟ್ಟು ರಾಜಕಾರಣದೆಡೆ ವಾಲುತ್ತಿದೆ ಎಂದು ಆರೋಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರು, ಈ ಬಾರಿಯ ಚುನಾವಣೆಯಲ್ಲಿ ಸಾಹಿತ್ಯದ ಬಗ್ಗೆ ಗೊತ್ತಿರುವವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಿದೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಾಗೂ ರಾಜಕೀಯ ಚುನಾವಣೆಗೂ ವ್ಯತ್ಯಾಸ ಇಲ್ಲದಂತಾಗಿದೆ. ಬಹಳಷ್ಟು ಯೋಚಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆಯೇ ಹೊರತು ಜಾತಿ, ಪ್ರಾದೇಶಿಕ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಶಿಶುನಾಳ ಷರೀಪ ಗುರು ಗೋವಿಂದ ಭಟ್ಟರ ವಂಶಸ್ಥ ಇವೆಲ್ಲಾ ಮಾನದಂಡಗಳಲ್ಲ. ಯಾವುದೇ ರಾಜಕೀಯ ಪಕ್ಷ ಇವರನ್ನೇ ಗೆಲ್ಲಿಸಬೇಕೆಂದು ಠರಾವು ಪಾಸು ಮಾಡುವ ಹಾಗೇ ಬೆಳವಣಿಗೆ ನಡೆದಿರುವುದನ್ನು ಖಂಡಿಸುವೆ. ಇಂತವರನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು. ಈಗಿನ ಸ್ಪರ್ಧೆಯೇ ಅನಾಗರೀಕ ಸ್ಪರ್ಧೆಯಾಗಿದೆ ಎಂದು ಜರಿದರು.