ಕುಷ್ಟಗಿ(ಕೊಪ್ಪಳ): ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದ ರಸಗೊಬ್ಬರ ಹಾಗೂ ಕೀಟನಾಶಕ ಮಳಿಗೆಯ ಮೇಲೆ ಕೃಷಿ ಇಲಾಖೆ ಜಾಗೃತ ದಳ ದಾಳಿ ನಡೆಸಿ, 70 ಚೀಲಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇಲ್ಲಿನ ಬಸವೇಶ್ವರ ವೃತ್ತದ ಶ್ರೀ ಚಂದಾಲಿಂಗೇಶ್ವರ ಎಂಟರ್ ಪ್ರೈಸಸ್ ಮಳಿಗೆ ಭೇಟಿ ನೀಡಿ ಕೃಷಿ ಇಲಾಖೆಯ ಜಾಗೃತ ದಳದ ತಂಡ ರಸ ಗೊಬ್ಬರ ಸ್ಟಾಕ್ ಪರಿಶೀಲನೆ ಮಾಡುತ್ತಿದ್ದಾಗ, ಈ ಪ್ರಕರಣ ಬೆಳಕಿಗೆ ಬಂದಿದೆ.
ಡಿಎಪಿ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಲಾಗುತ್ತಿತ್ತು. 50 ಕೆಜಿಯ ಪ್ರತೀ ಚೀಲಕ್ಕೆ 1350 ರೂ. ಇದೆ. ಆದರೆ ಇಲ್ಲಿ ಸಾವಯವ ಗೊಬ್ಬರವನ್ನು ಇದೇ ಡಿಎಪಿ ಎಂದು 800 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಸಾವಯವ ಗೊಬ್ಬರ ಚೀಲದ ಮೇಲೆ 50 ಕೆ.ಜಿ.ಯ ಪ್ರತಿ ಚೀಲಕ್ಕೆ 1,200 ರೂ.ಎಂ.ಆರ್.ಪಿ. ನಮೂದಿಸಲಾಗಿದೆ. ಅಂಗಡಿಯ ಹೆಸರಿನಲ್ಲಿ ಬಿಲ್ ಕೊಡದೇ ಮಾರಾಟ ಮಾಡಲಾಗುತ್ತಿತ್ತು. ಡಿಒಪಿ ಎಂದಿರುವುದನ್ನೇ ಡಿಎಪಿ ಎಂದು ಮಾರಾಟ ಮಾಡುತ್ತಿದ್ದರು. ಯಾವುದೇ ರೀತಿಯ ಬಿಲ್ ದಾಖಲೆಗಳು ಪತ್ತೆಯಾಗಿಲ್ಲ ಎಂದು ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ನಿರ್ದೇಶಕ ನಿಂಗಪ್ಪ ಮಾಹಿತಿ ನೀಡಿದ್ದಾರೆ.