ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ, ಯಡಿಯೂರಪ್ಪ ಅವರು ಸಿನಿಯರ್ ಲೀಡರ್. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ. ಅಂತಹ ವ್ಯಕ್ತಿ ಇಂದು ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ. ತಂತಿಯ ಮೇಲೆ ನಡೆಯುವ ಪರಿಸ್ಥಿತಿ ನನ್ನದು ಎಂದು ಹೇಳಿದ್ದಾರೆ. ಇದರಿಂದ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದರು.
ಯಡಿಯೂರಪ್ಪ ಅವರ ಸ್ಥಿತಿ ನೋಡಿದ್ರೆ, ನನಗೆ ಅಯ್ಯೋ ಅನಿಸುತ್ತೆ:ಶಿವರಾಜ್ ತಂಗಡಗಿ - ಕೊಪ್ಪಳ ನ್ಯೂಸ್
ಸಿಎಂ ಯಡಿಯೂರಪ್ಪ ಅವರ ಸ್ಥಿತಿ ನೋಡಿದರೆ ನನಗೆ ಅಯ್ಯೋ ಅಂತ ಅನಿಸುತ್ತದೆ. ಯಡಿಯೂರಪ್ಪ ಅವರೇ ತಂತಿ ಮೇಲೆ ಯಾಕೆ ನಡೆಯಿತ್ತೀರಿ? ಅಲ್ಲಿಂದ ಹೊರಬನ್ನಿ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಯಡಿಯೂರಪ್ಪ ಸ್ವಾಭಿಮಾನದ ಮನುಷ್ಯ. ಇಂತಹ ಸ್ಥಿತಿಯಲ್ಲಿ ಅವರು ಸಿಟ್ಟಿಗೆ ಬರೋರು. ಯಾಕೆ ಸುಮ್ಮನಿದ್ದಾರೆ ಎಂಬುದು ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಆಗುವಾಗ ಇದ್ದ ಹುಮ್ಮಸ್ಸು ಈಗ ಉಳಿದಿಲ್ಲ. ಬಿಜೆಪಿ ಅವರ ಎನರ್ಜಿ ಕುಗ್ಗಿಸುವ ಕೆಲಸ ಮಾಡುತ್ತಿದೆ ಅಂತ ಅನಿಸುತ್ತದೆ. ಹೀಗಾಗಿ, ಅವರು ಅಲ್ಲಿಂದ ಹೊರಬಂದು ಹೊಸ ಪಕ್ಷವಾದರೂ ಕಟ್ಟಲಿ ಅಥವಾ ನಮ್ಮ ಪಕ್ಷಕ್ಕಾದರೂ ಬರಲಿ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.
ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಕುಮಾರಸ್ವಾಮಿಯಾಗಲಿ, ಯಡಿಯೂರಪ್ಪ ಆಗಲಿ ಅಥವಾ ನಮ್ಮ ಪಕ್ಷದ ನಾಯಕರು, ಯಾರೇ ಆಗಿರಲಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಬಾರದು. ಒಂದು ಸಂಸಾರದಲ್ಲಿ ಸಣ್ಣಪುಟ್ಟ ಜಗಳಗಳಿರುವಂತೆ ನಮ್ಮ ಪಕ್ಷದಲ್ಲಿಯೂ ಸಣ್ಣಪುಟ್ಟ ಜಗಳಗಳು ಇರ್ತವೆ. ಆದರೆ, ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿದ್ದು, ನಮ್ಮ ಪಕ್ಷದಲ್ಲಿ ಸಾಮೂಹಿಕ ನಾಯಕತ್ವವಿದೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ರಾಜ್ಯಕ್ಕೆ ತಮ್ಮದೆ ಆದ ಕೊಡುಗೆ ಕೊಟ್ಟಿದ್ದಾರೆ. ನಮ್ಮ ನಾಯಕರ ಬಗ್ಗೆ ಮಾತನಾಡುವ ಬದಲು ತಮ್ಮ ತಮ್ಮ ಪಕ್ಷದ ಬಗ್ಗೆ ಮೊದಲು ಮಾತನಾಡಲಿ. ನಮಗೆ ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕ ಎಂದರು.