ಕೊಪ್ಪಳ: ಕೊರೊನಾ 2ನೇ ಅಲೆ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ 116 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಆರಂಭದಿಂದ 10 ದಿನಗಳವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇಕಡಾ 1 ರಷ್ಟಿತ್ತು. ಕಳೆದ 10 ದಿನಗಳಲ್ಲಿ ಶೇಕಡಾ ಎರಡರಷ್ಟಾಯಿತು. ಕಳೆದ ಎರಡು ದಿನಗಳಿಂದ ಸೋಂಕಿತರ ಸಾವಿನ ಪ್ರಮಾಣ ಶೇಕಡಾ 3 ರಷ್ಟಾಗಿದೆ. 2ನೇ ಅಲೆಯ ಪ್ರಾರಂಭದಿಂದ ಈವರೆಗೆ ಜಿಲ್ಲೆಯಲ್ಲಿ 116 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಕೊಪ್ಪಳ ತಾಲೂಕಿನಲ್ಲಿ 39, ಗಂಗಾವತಿ 51, ಕುಷ್ಟಗಿಯಲ್ಲಿ 10 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 16 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಹೆಚ್ಚಿನ ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ಜನರು ಟೆಸ್ಟ್ ಮಾಡಿಸಿಕೊಳ್ಳಬೇಕು. ಕೊರೊನಾ ಟೆಸ್ಟ್ ಕಡಿಮೆ ಮಾಡಿಲ್ಲ. ನಿತ್ಯ 1500 ರಿಂದ 1600 ರವರೆಗೆ ಟೆಸ್ಟ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗವಿಮಠದಲ್ಲಿ ಪ್ರಾರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ನೇರವಾಗಿ ದಾಖಲಾತಿ ಮಾಡುವುದಿಲ್ಲ. ಜಿಲ್ಲಾಸ್ಪತ್ರೆಯ ವ್ಯಾಪ್ತಿಯಲ್ಲಿ ಅದು ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು ನಮ್ಮ ಜಿಲ್ಲೆಗೆ ನೀಡಲಾಗಿರುವ ಆಕ್ಸಿಜನ್ ಕೋಟಾದಲ್ಲಿಯೇ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ನಿತ್ಯ 400 ರಿಂದ 500 ರವರೆಗೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈಗ ಶೇಕಡಾ 30 ರಷ್ಟು ಪಾಸಿಟಿವಿಟಿ ರೇಟ್ ಇದೆ. ಜನರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಓದಿ:ಲಸಿಕೆ ಬಗ್ಗೆ ತಪ್ಪು ಹರಡಿದ ಪರಿಣಾಮ ಕಂಪನಿಗಳು ಪ್ರೊಡಕ್ಷನ್ ಕಡಿಮೆ ಮಾಡಿವೆ: ಪ್ರಹ್ಲಾದ್ ಜೋಶಿ