ಕೊಪ್ಪಳ/ಕಲಬುರಗಿ:ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿಯ ನಡುವೆಯೂ ಇಂದಿನಿಂದ ಶಾಲಾ ಕಾಲೇಜುಗಳು ಆರಂಭವಾಗಿದೆ. ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಪೊಲೀಸರು ಗುಲಾಬಿ ಹೂವು ನೀಡಿ ಸ್ವಾಗತಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಹಿಳಾ ಠಾಣೆಯ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗುಲಾಬಿ ಹೂವು ಹಾಗೂ ಪೆನ್ನು ನೀಡುವ ಮೂಲಕ ಅವರನ್ನು ಸ್ವಾಗತಿಸಿದರು. ಇನ್ನು ಕೊರೊನಾ ಬಗ್ಗೆ ಜಾಗೃತಿ ವಹಿಸುವ ಮೂಲಕ ಶಾಲೆಗೆ ಬರುವಂತೆ ಮಹಿಳಾ ಠಾಣೆಯ ಪಿಐ ಮೌನೇಶ್ವರ ಮಾಲಿಪಾಟೀಲ್ ಹೇಳಿದರು.
ಮಕ್ಕಳಿಗೆ ಸ್ವಾಗತ ಕೋರಿದ ಶಿಕ್ಷಕರು-ಪೊಲೀಸರು ಕೆಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದಾಖಲಾಗಿರುವ 40 ವಿದ್ಯಾರ್ಥಿಗಳ ಪೈಕಿ ಇಂದು ಕೇವಲ ಮೂವರು ವಿದ್ಯಾರ್ಥಿಗಳು ಆಗಮಿಸಿದ್ದರು.
ಕಲಬುರಗಿಯಲ್ಲೂ ಶಾಲೆಗಳು ಪುನಾರಂಭಗೊಂಡಿದ್ದು, ಕೊರೊನಾ ಮಾರ್ಗಸೂಚಿ ಪಾಲಿಸಿ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ. ಇನ್ನು ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯನ್ನು ಸಿಂಗರಿಸಲಾಗಿತ್ತು. ಇನ್ನು ಶಾಲೆಗೆ ಆಗಮಿಸಿದ ಮಕ್ಕಳಿಗೆ ಸ್ಯಾನಿಟೈಸರ್ ನೀಡಿ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಯಿತು.