ಗಂಗಾವತಿ(ಕೊಪ್ಪಳ): ಶ್ರೀಮಾತಾ ಕ್ರಿಯೇಷನ್ ಬ್ಯಾನರ್ ಅಡಿ ನಿರ್ಮಾಣವಾದ 'ಸತ್ಯಂ' ಎಂಬ ಕನ್ನಡ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 17ರಂದು ನಗರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸ್ಯಾಂಡಲ್ವುಡ್ ಹಾಗೂ ತೆಲುಗು ಚಿತ್ರರಂಗದ ಹಲವು ನಟರು ಹಾಗೂ ನಟಿಯರು ಭಾಗಿಯಾಗಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
'ಪುಟ್ಟಗೌರಿ', 'ಕನ್ನಡತಿ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ರಂಜಿನಿ ರಾಘವನ್ 'ಸತ್ಯಂ' ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಇವರು ಸೇರಿದಂತೆ ಚಿತ್ರದ ನಾಯಕ ನಟ ಸಂತೋಷ್ ಬಾಲಾಜಿ, ಪೋಷಕ ನಟರಾದ ಅವಿನಾಶ್, ಪವಿತ್ರಾ ಲೋಕೇಶ್, ವಿನಯಾ ಪ್ರಸಾದ್, ನಟರಾಜ, ಮುಖ್ಯಮಂತ್ರಿ ಚಂದ್ರು, ಹಾಸ್ಯ ಕಲಾವಿದರಾದ ಉಮೇಶ, ಜಿ.ಬಸವರಾಜ ಕಟಿ, ನಿರ್ದೇಶಕ ಅಶೋಕ್ ಕಡಬ ಸೇರಿದಂತೆ ಅನೇಕರು ಧ್ವನಿ ಸುರುಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಿರ್ಮಾಪಕ ಮಾಂತೇಶ್ ವಿ.ಕೆ. ಮಾಹಿತಿ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಿತ್ರ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕರ್ನಾಟಕದ ಮಲೆನಾಡು, ಬೆಂಗಳೂರು, ಹೈದರಾಬಾದ್ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಜನವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆಗೆ ಯೋಜನೆ ರೂಪಿಸಲಾಗುತ್ತಿದೆ. ಕೆಜಿಎಫ್ ಸಿನಿಮಾಗೆ ಸಂಗೀತ ನೀಡಿರುವ ರವಿ ಬಸ್ರೂರಿ 'ಸತ್ಯಂ'ಗೂ ಸಂಗೀತ ನೀಡಿದ್ದಾರೆ. ಚಿತ್ರ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ" ಎಂದರು.
"ಚಿತ್ರದ ಪ್ರಮೋಷನ್ ಭಾಗವಾಗಿ ಮೊದಲ ಹಂತದಲ್ಲಿ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಮೊದಲ ಹಾಡನ್ನು ಗಂಗಾವತಿಯಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಇನ್ನುಳಿದ ಹಾಡುಗಳ ಧ್ವನಿ ಸುರುಳಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಪ್ರಮುಖರು ಭಾಗಿಯಾಗಲಿದ್ದಾರೆ. ಧ್ವನಿ ಸುರುಳಿ ಬಿಡುಗಡೆ ಬಳಿಕ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು ಮಾಂತೇಶ್ ತಿಳಿಸಿದರು.
ಈ ವೇಳೆ ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ಅಶೋಕಸ್ವಾಮಿ ಹೇರೂರು, ಮನೋಹರಸ್ವಾಮಿ, ರಾಘವೇಂದ್ರ ಶೆಟ್ಟಿ ಕೂಡ ಮಾತನಾಡಿದರು.
ಚಿತ್ರತಂಡ: 'ಕೆಂಪ', 'ಕರಿಯ 2' ಹಾಗೂ 'ಗಣಪ' ಚಿತ್ರಗಳ ಮೂಲಕ ಭರವಸೆ ಮೂಡಿಸಿದ ನಟ ಸಂತೋಷ್ ಬಾಲರಾಜ್ 'ಸತ್ಯಂ' ಸಿನಿಮಾಗೆ ನಾಯಕನಾಗಿದ್ದಾರೆ. ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ತಾತ ಮೊಮ್ಮಗನ ಸುತ್ತ ನಡೆಯುವ ಕಥಾಹಂದರದ ಚಿತ್ರವನ್ನು ಅಶೋಕ ಕಡಬ ನಿರ್ದೇಶಿಸಿದ್ದಾರೆ. ಕಿರುತೆರೆ ನಟಿ ರಂಜಿನಿ ರಾಘವನ್ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಕಿನ್ನಲ್ ರಾಜ್ ಹಾಡುಗಳ ಜೊತೆಗೆ ಸಂಭಾಷಣೆ ಬರೆದಿದ್ದು, ಸಿನಿಟೆಕ್ ಸೂರಿ ಛಾಯಾಗ್ರಹಣವಿದೆ. ಮಾಂತೇಶ್ ವಿ.ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದ ಆಡಿಯೋ ಹಕ್ಕು A2 ಮ್ಯೂಸಿಕ್ಗೆ ದೊಡ್ಡ ಮೊತ್ತಕ್ಕೆ ಈಗಾಗಲೇ ಮಾರಾಟವಾಗಿದೆ.
ಇದನ್ನೂ ಓದಿ:ಸಂತೋಷ್ ಬಾಲರಾಜ್ ನಟನೆಯ 'ಸತ್ಯಂ' ಟೀಸರ್ ರಿಲೀಸ್; ತಾತ-ಮೊಮ್ಮಗನ ಕಥೆಯಿದು..