ಕೊಪ್ಪಳ: ನನಗೆ ಎರಡು ಖಾತೆಗಳು ಸಿಕ್ಕಿರುವುದರಲ್ಲಿ ಯಾವ ಗುಟ್ಟು ಇಲ್ಲ. ನನ್ನ ಸಚಿವ ಸ್ಥಾನದ ಹಿಂದೆ ಸಂತೋಷ್ ಜಿ ಇಲ್ಲ, ಇದೆಲ್ಲ ಊಹಾಪೋಹ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಎರಡು ಖಾತೆ ಸಿಕ್ಕಿರೋದರ ಕುರಿತಂತೆ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ಹೀಗಿದೆ.. ಜಿಲ್ಲೆಗೆ ಪ್ರಾತಿನಿಧ್ಯ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿದೆ. ಇದರಲ್ಲಿ ಬೇರೆ ಯಾವ ಅರ್ಥ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೂತನ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿಗೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಮ್ಮ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಬೇಕು ಎಂಬ ಮಾತನ್ನು ಹೇಳಿದ್ದೆ. ಈಗ ನನಗೆ ಅವಕಾಶ ಲಭಿಸಿದೆ, ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದ್ರು.
ಕೆಲವು ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುದು ಗೊತ್ತಿದೆ. ಮುಂದಿನ ದಿನದಲ್ಲಿ ಮುಖ್ಯಮಂತ್ರಿಗಳು ಸಚಿವ ಸ್ಥಾನ ಕೊಡುತ್ತಾರೆ ಎಂದರು. ಇನ್ನು, ಸಚಿವ ಆನಂದ್ ಸಿಂಗ್ ಅಸಮಾಧಾನ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಉಳಿದವರ ಬಗ್ಗೆ ಮಾತನಾಡುವುದಿಲ್ಲ ಎಂದರು.
2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ :ಯಾವ ಖಾತೆ ಕೊಟ್ಟರೂ ಕೆಲಸ ಮಾಡಬೇಕು. ಜನರು ನಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ಕೆಲಸ ಮಾಡಲು ಒಂದೊಂದು ಖಾತೆ ಕೊಟ್ಟಿದ್ದಾರೆ. ಕೊಟ್ಟ ಖಾತೆಯಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದರು. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉತ್ತಮ ಯುವ ನಾಯಕ. 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ನನ್ನ ಟ್ರೇನ್ ಯಾವತ್ತೂ ಹಿಂದೆ ಹೋಗುವುದಿಲ್ಲ :ನಾವು 2023ಕ್ಕೆ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಪರೋಕ್ಷವಾಗಿ ಬೊಮ್ಮಾಯಿ ತಮ್ಮ ನಾಯಕ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು. ಹಿಂದೆ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಟ್ರೇನ್ ಯಾವತ್ತೂ ಹಿಂದೆ ಹೋಗುವುದಿಲ್ಲ.
ನಾನು ಮುಂದೆ ಮಾತ್ರ ನೋಡುತ್ತೇನೆ. ನನಗೆ ಕೊಟ್ಟಿರುವ ಎರಡು ಇಲಾಖೆಗಳು ಅತ್ಯಂತ ಮಹತ್ವದ ಇಲಾಖೆಗಳು. ನಾನು ಎರಡು ಇಲಾಖೆಯಲ್ಲಿ ನಾನು ಹೊಸ ಕೊಡುಗೆಯನ್ನು ಕೊಡುತ್ತೇನೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.