ಕೊಪ್ಪಳ: ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಕನಕದಾಸರ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಹೆಚ್ಚುವರಿ ಜಾಗದ ಕುರಿತು ಅಧಿಕಾರಿಗಳು ಯಾರಿಗೂ ತಿಳಿಸದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟನೆ ನೀಡಿದ್ದಾರೆ.
ಕನಕದಾಸರ ಬಗ್ಗೆ ನಾವು ಅಪಾರ ಗೌರವವಿಟ್ಟುಕೊಂಡಿದ್ದೇವೆ. ಹಿಂದಿನಿಂದಲೂ ಕನಕದಾಸರ ವೃತ್ತವು ನಗರಸಭೆ ಆಸ್ತಿಯಲ್ಲೇ ಇತ್ತು. ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆ ಶಿಥಿಲಗೊಂಡಿದೆ ಎಂದು ಇತ್ತೀಚಿಗೆ ಆ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಕನಕದಾಸರ ಪುತ್ಥಳಿ ಸ್ಥಾಪನೆಗೆ ಹೆಚ್ಚುವರಿ ಜಾಗ ಬೇಕಿದ್ದರೆ ನಿಯಮದ ಪ್ರಕಾರ ಮಾಡಬೇಕಾಗುತ್ತದೆ. ಕಾನೂನು ಪ್ರಕಾರ ಹೆಚ್ಚುವರಿ ಜಾಗ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಏಕಾಏಕಿ ಆಡಳಿತಾಧಿಕಾರಿಗಳು ಯಾರಿಗೂ ತಿಳಿಸದೆ ಸರ್ವಾಧಿಕಾರಿಯ ರೀತಿ ನಿರ್ಧಾರ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಹಾಗೂ ನಗರಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.