ಗಂಗಾವತಿ(ಕೊಪ್ಪಳ):ಕಲೆ ಮತ್ತು ಪ್ರತಿಭೆಗೆ ಊರು-ಕೇರಿ, ರಾಜ್ಯ-ದೇಶದಂತಹ ಗಡಿಗಳ ಮಿತಿ ಇರಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಇದಕ್ಕೆ ಸೂಕ್ತ ಉದಾಹರಣೆ ಎಂಬಂತೆ ರಷ್ಯಾದ ಯುವಕನೊಬ್ಬ ಪ್ರವಾಸಕ್ಕೆಂದು ಆನೆಗೊಂದಿಗೆ ಆಗಮಿಸಿದ್ದು, ಅವರ ಕುಂಚದಲ್ಲಿ ವಿವಿಧ ಚಿತ್ರಗಳು ಅರಳುತ್ತಿವೆ. ಹಿಂದುಗಳ ಆರಾಧ್ಯ ದೇವರಾದ ಶಿವ, ಗಣೇಶರಂತಹ ಚಿತ್ರಗಳಿಗೆ ಈ ಯುವಕ ಬಣ್ಣದ ಮೂಲಕ ಜೀವ ತುಂಬುತ್ತಿದ್ದಾರೆ. ಅಂಜನಾದ್ರಿ ಸೇರಿದಂತೆ ಆನೆಗೊಂದಿ ಭಾಗದಲ್ಲಿ ಕಂಡು ಬರುವ ಪ್ರಾಕೃತಿಕ ದೃಶ್ಯಗಳನ್ನು ತಮ್ಮ ಕುಂಚದಲ್ಲಿ ಹಿಡಿದಿಡುತ್ತಿರುವ ಈ ಯುವಕ ನೋಡುಗರನ್ನು ತನ್ನತ್ತ ಸೆಳೆಯುತ್ತಿದ್ದಾರೆ.
91 ಡೀಪ್ ಎಂಬ ನಿಕ್ ನೇಮ್ ಹೆಸರಲ್ಲಿ ಕರೆಯಿಸಿಕೊಳ್ಳುವ ಈ ಯುವಕನ ಹೆಸರು ಡೇನಿಯಲ್. ಮೂಲತಃ ರಷ್ಯಾ ದೇಶದವರು. ಶಿಲ್ಪಕಲೆಯ ಪಾರಂಪಾರಿಕ ತಾಣ ಎಂದು ಗುರುತಿಸಿಕೊಂಡಿರುವ ರಷ್ಯಾದ ಸೈಂಟ್ ಪೀಟರ್ಸ್ಬರ್ಗ್ ಪಟ್ಟಣದವರು. ರಷ್ಯಾದಲ್ಲಿ ವಾಲ್ ಪೈಂಟ್ಗೆ (ಗೋಡೆ ಬರಹ) ಹೆಚ್ಚಿನ ಆದ್ಯತೆ ಇದೆ. ಈ ಪೈಂಟಿಂಗ್ ವೃತ್ತಿಯಿಂದಲೇ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದ ಈ ಡೇನಿಯಲ್, ಹಂಪಿ ಮತ್ತು ಆನೆಗೊಂದಿಯ ಪ್ರವಾಸಕ್ಕೆಂದು ಕಳೆದ ಮೂರು ತಿಂಗಳ ಹಿಂದೆ ಬಂದಿದ್ದಾರೆ.
ಇದೀಗ ಆನೆಗೊಂದಿ ಸಮೀಪದ ಹನುಮನಹಳ್ಳಿಯ ಡ್ರೀಮ್ ಪ್ಯಾರಾಡೈಸ್ ಗೆಸ್ಟ್ ಹೌಸ್- ರೆಸ್ಟೋರೆಂಟ್ನಲ್ಲಿ ತಂಗಿರುವ ಡೇನಿಯಲ್, ಹಗಲು ಆನೆಗೊಂದಿ ಸುತ್ತಲಿನ ಪರಿಸರದಲ್ಲಿ ಪ್ರವಾಸ ಮಾಡುತ್ತಾರೆ. ಬಿಡುವಿನ ವೇಳೆ ಮತ್ತು ರಾತ್ರಿ ಪೈಂಟಿಂಗ್ ಮಾಡುತ್ತಾರೆ. ಪೈಂಟಿಂಗ್ ಮಾಡಿಕೊಡುವಂತೆ ಕೇಳುವ ಮಾಲೀಕರ ರೆಸ್ಟೋರೆಂಟ್ಗಳಿಗೆ ತೆರಳುವ ಡೇನಿಯಲ್, ಬೇಡಿಕೆ ಇಟ್ಟ ಮಾದರಿಯಲ್ಲಿ ವಾಲ್ ಪೈಂಟಿಂಗ್ ಮಾಡಿಕೊಡುತ್ತಾರೆ. ಡೇನಿಯಲ್ ಕೈಯಲ್ಲಿ ಈಶಾ ಫೌಂಡೇಶನ್ ಧ್ಯಾನಾಸಕ್ತ ಶಿವ, ಅಕ್ಟೋಪಸ್ನಲ್ಲಿ ಗಣೇಶ, ಧ್ಯಾನಾಸಕ್ತ ಗೌತಮ ಬುದ್ಧನ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ.
ಮಕ್ಕಳಿಗೆ ಪೈಂಟಿಂಗ್ ಪಾಠ:ತಮ್ಮ ಬಿಡುವಿನ ವೇಳೆಯಲ್ಲಿ ಬೈಸಿಕಲ್ ಇಲ್ಲವೇ ಪಾದಯಾತ್ರೆಯ ಮೂಲಕ ಆನೆಗೊಂದಿ, ಅಂಜನಾದ್ರಿ, ಹನುಮನಹಳ್ಳಿ, ಸಣಾಪುರ, ಗಡ್ಡಿ, ಮಲ್ಲಾಪುರ, ರಾಂಪೂರದಂತ ಹಳ್ಳಿಗಳಲ್ಲಿ ಸಂಚರಿಸುವ ಡೇನಿಯಲ್, ಪ್ರಾಕೃತಿಕ ದೃಶ್ಯಗಳನ್ನು ತಮ್ಮ ಕಣ್ಣಿನಲ್ಲಿ ಸೆರೆ ಹಿಡಿಯುತ್ತಾರೆ. ಬಳಿಕ ಆ ದೃಶ್ಯಗಳನ್ನು ಗೋಡೆಗಳ ಮೇಲೆ ಇಲ್ಲವೇ ಕ್ಯಾನ್ವಸ್ ಪೇಪರ್ ಮೇಲೆ ಚಿತ್ರಿಸುತ್ತಾರೆ. ಇನ್ನು ಕೆಲ ಸಂದರ್ಭದಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ಹೋಗುವ ಡೇನಿಯಲ್ ಅಲ್ಲಿನ ಶಾಲಾ ಮಕ್ಕಳಿಗೆ ಪೈಂಟಿಂಗ್ ಮಾಡುವುದು ಹೇಗೆ ಎಂಬ ಬಗ್ಗೆ ಪಾಠ ಹೇಳಿ ಕೊಡುತ್ತಾರೆ.