ಕೊಪ್ಪಳ: ದಿನದ ಆರಂಭದಿಂದ ಹಿಡಿದು ದಿನ ಮುಗಿಯುವವರೆಗೂ ಮನುಷ್ಯ ಈಗ ಬಹುಪಾಲು ಯಂತ್ರಗಳನ್ನೇ ಅವಲಂಬಿಸಿದ್ದಾನೆ. ದೊಡ್ಡ ದೊಡ್ಡ ನಗರಗಳಲ್ಲಿ ಕಂಡು ಬರುತ್ತಿದ್ದ ಎಲೆಕ್ಟ್ರಾನಿಕ್ ಬಾಡಿ ಮಸಾಜ್ ಈಗ ಸಣ್ಣ ಊರುಗಳಿಗೂ ಕಾಲಿಟ್ಟಿದೆ. ಇದು ಸ್ಥಳೀಯರ ಆಕರ್ಷಣೆಗೂ ಕಾರಣವಾಗಿದೆ.
ಹೇರ್ ಸೆಲೂನ್ನಲ್ಲಿ ಬಾಡಿ ಮಸಾಜ್ ಯಂತ್ರ ಜಿಲ್ಲೆಯಲ್ಲಿ ಇದೇ ಮೊದಲು ಎಂಬಂತೆ ಜಿಲ್ಲಾ ಕೇಂದ್ರ ಕೊಪ್ಪಳ ನಗರದಿಂದ ಕೇವಲ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಪಟ್ಟಣಕ್ಕೂ ಬಾಡಿ ಮಸಾಜ್ ಯಂತ್ರ ಬಂದಿದೆ. ಹೌದು, ದೊಡ್ಡ ದೊಡ್ಡ ನಗರಗಳಲ್ಲಿ ಕಂಡು ಬರುತ್ತಿದ್ದ ಬಾಡಿ ಮಸಾಜ್ ಯಂತ್ರಗಳು ಈಗ ಸಣ್ಣ ಸಣ್ಣ ಊರುಗಳಿಗೂ ಲಗ್ಗೆ ಇಡುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿಯೇ ಮೊದಲು ಎಂಬಂತೆ ಭಾಗ್ಯನಗರ ಪಟ್ಟಣದಲ್ಲಿ ವಿಜಯ್ ಎಂಬುವವರು ಈ ಬಾಡಿ ಮಸಾಜ್ ಯಂತ್ರವನ್ನು ತಂದಿದ್ದಾರೆ. ಭಾಗ್ಯನಗರದಲ್ಲಿ ಬದ್ರಿ ಬ್ರದರ್ಸ್ ಹೇರ್ ಕಟ್ ಸಲೂನ್ ನಡೆಸುತ್ತಿರುವ ವಿಜಯ್ ತಮ್ಮ ವೃತ್ತಿಯಲ್ಲಿ ಗ್ರಾಹಕರಿಗೆ ಏನಾದರೂ ಹೊಸ ಸೇವೆ ನೀಡಬೇಕು ಎಂಬ ಉದ್ದೇಶದೊಂದಿಗೆ ರೋಬೋ ಟೆಕ್ನಾಲಜಿ ಹೊಂದಿರುವ ಬಾಡಿ ಮಸಾಜ್ ಯಂತ್ರವನ್ನು ತಂದಿದ್ದಾರೆ.
ಬಿಡುವಿಲ್ಲದ ಇಂದಿನ ಆಧುನಿಕ ಶೈಲಿಯ ಜೀವನದಿಂದ ಜನರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಜನರಿಗೆ ದೈಹಿಕ ಹಾಗೂ ಮಾನಸಿಕವಾಗಿ ರಿಲೀಫ್ ಬೇಕಾಗುತ್ತದೆ. ಈ ಯಂತ್ರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕವಾಗಿ ವರ್ಕ್ ಮಾಡುತ್ತದೆಯಂತೆ. ರೋಬೋ ಟೆಕ್ನಾಲಜಿ ಹೊಂದಿರುವ ಈ ಬಾಡಿ ಮಸಾಜ್ ಯಂತ್ರದಿಂದ ಮಸಾಜ್ ಮಾಡಿಸಿಕೊಂಡರೆ ಕೀಲು ನೋವು, ಮಾನಸಿಕ ಒತ್ತಡ, ದಣಿವು ಕಡಿಮೆಯಾಗುತ್ತದೆ ಎನ್ನುತ್ತಾರೆ ಯಂತ್ರ ಅಳವಡಿಸಿರುವ ಬದ್ರಿ ಬ್ರದರ್ಸ್ ಹೇರ್ ಕಟ್ ಸಲೂನ್ ಮಾಲೀಕ ವಿಜಯ್.
ಕೊಪ್ಪಳ ಭಾಗದಲ್ಲಿ ಈ ರೀತಿಯಾದ ಮಸಾಜ್ ಯಂತ್ರವನ್ನು ಈವರೆಗೂ ತಂದಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಯಂತ್ರಗಳು ಇವೆ. ಈ ಯಂತ್ರದಲ್ಲಿ ಬಾಡಿ ಮಸಾಜ್ ಮಾಡಿಸಿಕೊಂಡರೆ ರಿಲೀಫ್ ಆಗುತ್ತದೆ ಎನ್ನುತ್ತಾರೆ ಗ್ರಾಹಕರು.
ಇನ್ನು ಗ್ರಾಹಕರಿಗೆ ಹೊಸ ಸೇವೆ ನೀಡುವ ಮನಸಿನಿಂದ ಬಾಡಿ ಮಸಾಜ್ ಯಂತ್ರ ತಂದಿರುವ ವಿಜಯ್ ಅವರು ಸೀನಿಯರ್ ಸಿಟಿಜನ್ಸ್ ಬಾಡಿ ಮಸಾಜ್ ಮಾಡಿಸಿಕೊಳ್ಳಲು ಬಂದ್ರೆ ಡಿಸ್ಕೌಂಟ್ ಸಹ ನೀಡುತ್ತಾರಂತೆ. ಒಟ್ಟಾರೆಯಾಗಿ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಯಂತ್ರ ಬಂದಿರೋದು ಭಾಗ್ಯನಗರ ಜನರ ಗಮನ ಸೆಳೆಯುತ್ತಿದೆ.