ಗಂಗಾವತಿ:ಇದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ನಗರದ ಪ್ರಮುಖ ರಸ್ತೆ. ಆದರೆ ಈ ರಸ್ತೆಯಲ್ಲಿ ಓಡಾಡಲು ವಾಹನ ಸವಾರರಿಗೆ ಧೈರ್ಯ ಬೇಕು ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
ಈ ರಸ್ತೆಯಲ್ಲಿ ಯಾವುದೇ ದರೋಡೆಗಳಾಗಲಿ, ಸುಲಿಗೆಯಾಗಲಿ ನಡೆಯಲ್ಲ. ಆದರೆ ಇಡೀ ರಸ್ತೆ ಹಾಳಾಗಿದೆ. ಶಿವೆ ಚಿತ್ರಮಂದಿರದಿಂದ ಶಾಸಕರ ನಿವಾಸಕ್ಕೆ ಕೇವಲ ಕಾಲು ಕಿ.ಮೀ. ಅಂತರ. ಆದರೆ ವಾಹನದ ಮೂಲಕ ಸಂಚರಿಸಿಸಲು 10 ನಿಮಿಷಗಳೇ ಬೇಕು.
ರಸ್ತೆ ಅಷ್ಟೊಂದು ಹಾಳಾಗಿದ್ದರೂ ಸ್ವತಃ ಶಾಸಕರೇ ಇದೇ ರಸ್ತೆಯಲ್ಲಿ ನಿತ್ಯ ಓಡಾಡುತ್ತಾರೆ. ನಗರದ ಇತರೆ ಭಾಗದ ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದರೆ, ಈ ರಸ್ತೆ ಮಾತ್ರ ಇನ್ನೂ ಹಾಳಾಗುತ್ತಲೇ ಇದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಶಾಸಕರು ತಮ್ಮ ಮನೆಯ ರಸ್ತೆಯೇ ಹೀಗಿಟ್ಟುಕೊಂಡರೆ, ಅವರ ಬಳಿ ಸಮಸ್ಯೆ ಹೇಳಿಕೊಳ್ಳಲು ಹೋಗುವುದಾದರೂ ಹೇಗೆ? ದೊಡ್ಡ ಮಟ್ಟದ ರಸ್ತೆ ಅಪಘಾತ ಸಂಭವಿಸುವ ಮುನ್ನವೇ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮಾತು.