ಕುಷ್ಟಗಿ(ಕೊಪ್ಪಳ):ಕುಷ್ಟಗಿ - ಹನುಮಸಾಗರ - ಪಟ್ಟದಕಲ್ಲ ರಾಜ್ಯ ಹೆದ್ದಾರಿಯ ತಾಲೂಕಿನ ತಳವಗೇರಾ ಗ್ರಾಮದ ಹೃದಯಭಾಗದ ರಸ್ತೆ ಮಳೆಯಿಂದ ಗುಂಡಿಗಳಾಗಿ ವಾಹನ ಸವಾರರ ಜೀವಕ್ಕೆ ಸಂಚಕಾರ ತಂದೊಡ್ಡಿದೆ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ದುರಸ್ತಿ ಮಾಡಿಸದೇ ಕಣ್ಮುಚ್ಚಿ ಕುಳಿತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತಳವಗೇರಾ ಗ್ರಾಮದ ಮೂಲಕ ಹಾದು ಹೋಗಿರುವ ಈ ರಾಜ್ಯ ಹೆದ್ದಾರಿಯು ವಿಶ್ವ ಪರಂಪರೆ ಐತಿಹಾಸಿಕ ಪ್ರೇಕ್ಷಣಿ ಸ್ಥಳಗಳಾದ ಬದಾಮಿ ಪಟ್ಟದಕಲ್, ಐಹೊಳೆ ಸಂಪರ್ಕಿಸುವ ರಸ್ತೆಯಾಗಿದ್ದು, ಕುಷ್ಟಗಿಯಿಂದ ತಳವಗೇರಾದವರೆಗೆ ಸಂಪೂರ್ಣ ಹದಗೆಟ್ಟಿದೆ.
ಇದರಲ್ಲಿ ತಳವಗೇರಾ ವ್ಯಾಪ್ತಿಯಯಲ್ಲಿ ಇಡೀ ರಸ್ತೆಯನ್ನು ಗುಂಡಿಗಳು ಅಗಲೀಕರಣಗೊಳಿಸಿವೆ. ಮಳೆ ಸಂದರ್ಭದಲ್ಲಿ ಮೊಣಕಾಲುವರೆಗೂ ನೀರಿನ ಮಟ್ಟವಿದ್ದು, ಗುಂಡಿಯ ಆಳ ಅರಿಯದೇ ಸಂಚರಿಸುವ ದ್ವಿಚಕ್ರ ವಾಹನಗಳ ಸೈಲೆನ್ಸೆರ್ನಲ್ಲಿ ನೀರು ಹೊಕ್ಕು ಬಂದ್ ಆಗಿ ವಾಹನ ಸವಾರರರು ಪರದಾಡುವಂತಾಗಿದೆ. ಬಸ್, ಲಾರಿ ಹಾಗೂ ದೊಡ್ಡ ವಾಹನಗಳು ಜೋಲಿ ಹೊಡೆಯುತ್ತ ಸಂಚರಿಸುತ್ತಿರುವುದನ್ನು ಕಾಣಬಹುದಾಗಿದೆ.
ಬೈಕ್ ಸವಾರರು ಎಷ್ಟೋ ಬಾರಿ ಈ ಗುಂಡಿಯಲ್ಲಿ ಮುಗ್ಗರಿಸಿ ಬಿದ್ದು ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳಿವೆ. ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದು ಗುಂಡಿಗಳಾಗಿದ್ದು, ಇಷ್ಟಾಗಿಯೂ ಲೋಕೋಯೋಗಿ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.
ಗ್ರಾಮದ ಶರಣಗೌಡ ಮರೇಗೌಡ್ರು ಪ್ರತಿಕ್ರಿಯಿಸಿ, ಶುದ್ದ ನೀರಿನ ಘಟಕಕ್ಕಾಗಿ ಹೋರಾಟದಲ್ಲಿ ಪೊಲೀಸ್ ಕೇಸ್ ಆಗಿ ನ್ಯಾಯಾಲಯಕ್ಕೆ ಅಲೆದಾಡಿದ್ದೇವೆ. ಈ ರಸ್ತೆ ಅವ್ಯವಸ್ಥೆಗೀಡಾಗಿದ್ದರೂ ನ್ಯಾಯಕ್ಕಾಗಿ ಪ್ರತಿಭಟಿಸಿದರೆ ಎಲ್ಲಿ ಕೇಸ್ ಬೀಳುವುದೋ, ಕೋರ್ಟ್ ಕಚೇರಿ ಅಲೆದಾಡಬೇಕಾಗುತ್ತದೆಯೋ ಎಂದು ಪ್ರತಿಭಟಿಸದೇ ಸುಮ್ಮನಾಗಿದ್ದೇವೆ. ತಳವಗೇರಾದ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಗಮನಕ್ಕೆ ತಂದಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.