ಅಂಜನಾದ್ರಿ ಹುಲಿಗಿ ರಸ್ತೆ ತುಂಬ ಗುಂಡಿಗಳದ್ದೇ ದರ್ಬಾರ್ ಗಂಗಾವತಿ(ಕೊಪ್ಪಳ)ಸೋಮವಾರ ತಡರಾತ್ರಿ ಸುರಿದ ಒಂದೇ ಮಳೆಗೆ ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬಂಡವಾಳ ಬಯಲಾಗಿದೆ. ಇಡೀ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿ ನೀರಿನಿಂದ ತುಂಬಿಕೊಂಡಿವೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳ ಸಂಚಾರಿಗಳು ಪರದಾಡುವಂತಾಗಿದೆ. ರಸ್ತೆಯಲ್ಲಿ ವಾಹನಗಳು ಎದ್ದು-ಬಿದ್ದು ಸಂಚರಿಸುತ್ತಿದ್ದು, ಪ್ರಯಾಣಿಕರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.
ಮಳೆಗೆ ಕೊಚ್ಚಿ ಹೋದ ಡಾಂಬರ್: ಗಂಗಾವತಿಯಿಂದ ಸಂಗಾಪುರ, ಕಡೆಬಾಗಿಲು ಮಾರ್ಗವಾಗಿ ಅಂಜನಾದ್ರಿ-ಹುಲಿಗಿಗೆ ಒಂದು ವರ್ಷದ ಹಿಂದೆಯಷ್ಟೇ ಲೋಕೋಪಯೊಗಿ ಇಲಾಖೆಯಿಂದ ರಸ್ತೆ ನಿರ್ಮಿಸಲಾಗಿದೆ. ಇಷ್ಟರೊಳಗೆ ಬಿದ್ದ ಸಣ್ಣ ಮಳೆಗೆ ಇಡೀ ರಸ್ತೆಯ ಡಾಂಬರ್ ಕೊಚ್ಚಿಕೊಂಡು ಹೋಗಿದೆ. ಇಡೀ ರಸ್ತೆಯುದ್ದಕ್ಕೂ ಡಾಂಬರ್ಗಿಂತ ಗುಂಡಿಗಳೇ ಗೋಚರಿಸುತ್ತಿವೆ. ಮಳೆ ಬಂದಾಗ ಮಳೆ ನೀರು ಗುಂಡಿಗಳಲ್ಲಿ ಸಂಗ್ರಹಗೊಂಡು ತಗ್ಗಿನ ಆಳ ಎಷ್ಟಿದೆ ಎನ್ನುವುದು ಅರಿವಾಗದೇ ವಾಹನಗಳನ್ನು ಇಳಿಸುತ್ತಿರುವ ಚಾಲಕರು ಫಜೀತಿಗೆ ಸಿಲುಕುತ್ತಿದ್ದಾರೆ.
ಮುಖ್ಯವಾಗಿ ಕಡೇಬಾಗಿಲು ಬಳಿಯ ಕಡೆಬಾಗಿಲು ಬುಕ್ಕಸಾಗರದ ಸೇತುವೆ ನಿರ್ಮಾಣಗೊಂಡ ಬಳಿಕ ಕಂಪ್ಲಿ ಮಾರ್ಗದ ಮೂಲಕ ಹೋಗುತ್ತಿದ್ದ ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಮಾರ್ಗದ ಬಹುತೇಕ ವಾಹನಗಳು ಹೆಚ್ಚು ಪ್ರಮಾಣದಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ.
ವಾಹನಗಳ ಸಂಚಾರ ಹೆಚ್ಚಳ: ಕಂಪ್ಲಿ ಮೂಲಕ ಹೊಸಪೇಟೆಗೆ 45 ಕಿ ಮೀ ಅಂತರವಿದ್ದು, ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿದೆ. ಆದರೆ ಕಡೇಬಾಗಿಲು-ಬುಕ್ಕಸಾಗರ ಸೇತುವೆ ಮೂಲಕ ಪ್ರಯಾಣಿಸಿದರೆ ಹೊಸಪೇಟೆ ನಗರ ಕೇವಲ 27 ಕಿ.ಮೀ ಅಂತರವಿದ್ದು ಅರ್ಧ ಗಂಟೆಯಲ್ಲಿ ತಲುಪಬಹುದು. ಹೀಗಾಗಿ ನಿತ್ಯ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಹೊಸಪೇಟೆಗೆ ಓಡಾಡುತ್ತಿವೆ. ಇದೀಗ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ವಾಹನಗಳ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಈ ಭಾಗದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರಿಗೆ ರಸ್ತೆ ಪ್ರಯಾಣ ನರಕದ ಅನುಭವ ನೀಡುತ್ತಿದೆ.
ಅಂಜನಾದ್ರಿ ಸೇರಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಈ ರಸ್ತೆ ಬಳಕೆ: ಅಂಜನಾದ್ರಿ, ನವವೃಂದಾವನ, ಆನೆಗೊಂದಿ, ಪಂಪಾಸರೋವರ, ಹುಲಗಿ ಸೇರಿದಂತೆ ಬಹುತೇಕ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಇದೇ ರಸ್ತೆ ಬಳಸಿಕೊಂಡು ಹೋಗಬೇಕಿರುವ ಕಾರಣಕ್ಕೆ ಜನ ಸಂಬಂಧಿತ ಇಲಾಖೆಯ ಅಧಿಕಾರಿಗಳನ್ನು ಶಪಿಸುತ್ತಲೆ ಪ್ರಯಾಣ ಮಾಡುವಂತಾಗಿದೆ.
ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತ: ಸಂಗಾಪುರ ಗ್ರಾಮದ ನಿವಾಸಿ ವೀರಭದ್ರಯ್ಯ ಈಟಿವಿ ಭಾರತ್ ದೊಂದಿಗೆ ಮಾತನಾಡಿ, ರಸ್ತೆ ನಿರ್ಮಾಣ ಮಾಡಿದ ಕೆಲವೇ ತಿಂಗಳಲ್ಲಿ ಹಾಳಾಗಿದೆ. ಇದೀಗ ಮಳೆಯಿಂದಾಗಿ ರಸ್ತೆಯ ಬಹುತೇಕ ಭಾಗದಲ್ಲಿ ಮಳೆ ನೀರು ನಿಂತು ಓಡಾಡಲು ಆಗದ ಸ್ಥಿತಿ ನಿರ್ಮಾಣಗೊಂಡಿದೆ.ಕೆಲವೊಮ್ಮೆ ವಾಹನಗಳು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತ ಮಾಡಿಕೊಂಡಿವೆ. ಈ ಭಾಗದ ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಬರುವ ಪ್ರಯಾಣಿಕರು ಈ ರಸ್ತೆಯ ಸ್ಥಿತಿ ನೋಡಿ ಸ್ಥಳೀಯ ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕಿ ಸಂಚರಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಳೆಯಿಂದ ವಿಧಾನಸೌಧ-ರಾಜಭವನ ಮಧ್ಯದ ಬೃಹತ್ ಕಾಂಪೌಂಡ್ ಕುಸಿತ