ಗಂಗಾವತಿ :ಅಕ್ರಮವಾಗಿ ತುಂಗಭದ್ರಾ ನದಿಯಿಂದ ಮರಳು ತಂದು ಬೆಟ್ಟದ ಪ್ರದೇಶದಲ್ಲಿ ಸಂಗ್ರಹ ಮಾಡಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಸಂಗಾಪುರ ಗ್ರಾಮದ ಸಮೀಪದಲ್ಲಿರುವ ಬೆಟ್ಟದ ಪ್ರದೇಶದಲ್ಲಿ ಅಕ್ರಮವಾಗಿ ದಂಧೆಕೋರರು ಸಂಬಂಧಿಸಿ ಇಲಾಖೆಯಿಂದ ಅನುಮತಿ ಪಡೆಯದೇ ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಪಡೆದ ಕಂದಾಯ ಇಲಾಖೆಯ ಸಿಬ್ಬಂದಿ ತಹಶೀಲ್ದಾರ್ ರೇಣುಕಾ ನೇತೃತ್ವದಲ್ಲಿ ದಾಳಿ ಮಾಡಿದ್ದರು. ಈ ವೇಳೆ, ದಂಧೆಕೋರರು ಮರಳು ಬಿಟ್ಟು ಓಡಿ ಹೋಗಿದ್ದಾರೆ. ಸುಮಾರು ಎಂಟು ಟನ್ ಪ್ರಮಾಣದಷ್ಟು ಮರಳನ್ನು ಅಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ಸಾಗಿಸಿದ್ದಾರೆ.
ಈ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು. ಸರ್ಕಾರಿ ಕಾಮಗಾರಿಗಳ ಟೆಂಡರ್ ಪಡೆದವರು ಮರಳಿನ ಮೌಲ್ಯಕ್ಕೆ ತಕ್ಕಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ತೆರಿಗೆ ಪಾವತಿಸುತ್ತಾರೆ ಎಂದು ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.