ಕುಷ್ಟಗಿ(ಕೊಪ್ಪಳ):ತಾಲೂಕಿನ ರ‍್ಯಾವಣಕಿ ಗ್ರಾಮದಲ್ಲಿ ಹಲವು ವರ್ಷಗಳ ಭೂ ವ್ಯಾಜ್ಯಕ್ಕೆ ಗ್ರಾಮ ವಾಸ್ತವ್ಯದ ಮೂಲಕ ಪರಿಹಾರ ಸಿಕ್ಕಿದೆ. ಗ್ರಾಮದ ತೆರೆದ ಬಾವಿಯ ಪಕ್ಕದಲ್ಲಿ ಗ್ರಾಮದ ಚರಂಡಿ ನೀರು ಜಮೆಯಾಗುತ್ತಿತ್ತು.
ಮಳೆಗಾಲದಲ್ಲಿ ತೆರೆದ ಬಾವಿಯ ಸುತ್ತಲು ಮಳೆ ನೀರು ಸಹಿತ ಚರಂಡಿ ನೀರು ಮಡುಗಟ್ಟಿ ನಿಂತು ಬಸಿ ನೀರು ಬಾವಿ ಸೇರುತ್ತಿತ್ತು. ಕಾರಣದಿಂದ ತೆರೆದ ಬಾವಿಯ ನೀರನ್ನು ಕಳೆದ ಒಂದು ವರ್ಷದಿಂದ ಬಳಸುವುದನ್ನು ಬಿಟ್ಟಿದ್ದರು.
ಹಲವು ವರ್ಷಗಳಿಂದ ಇತ್ಯರ್ಥವಾಗದ ಸಮಸ್ಯೆಗೆ ಗ್ರಾಮ ವಾಸ್ತವ್ಯದಿಂದ ಪರಿಹಾರ ಒಂದು ಕಾಲದಲ್ಲಿ ಕುಡಿಯುವ ನೀರಿನ ಮೂಲವಾಗಿದ್ದ ತೆರೆದ ಬಾವಿ ಸೆಲೆ ಇದ್ದರೂ ನಿರುಪಯುಕ್ತವಾಗಿತ್ತು. ಬಾವಿಯ ಪಕ್ಕದ ಚರಂಡಿ ಜಾಗದಲ್ಲಿ ನಿವೇಶನ ಹಂಚಿಕೆಯಾಗಿದೆ. ಸದರಿ ನಿವೇಶನದ ಮೂಲಕ ನೀರು ಮುಂದೆ ಹರಿಯಲು ನಿವೇಶನದಾರರು ಮುಂದಾಗದೇ ಇರುವುದು ಭೂವ್ಯಾಜ್ಯವಾಗಿತ್ತು.
ಅಲ್ಲದೆ, ನಿವೇಶನದಾರರು ಜಾಗವನ್ನು ಎತ್ತರಿಸಿದ್ದರಿಂದ ಗ್ರಾಮದ ಚರಂಡಿ ನೀರು ಬಾವಿಯ ಪಕ್ಕದಲ್ಲಿ ನಿಲ್ಲುತ್ತಿತ್ತು. ಹಲವು ವರ್ಷಗಳಿಂದ ನಡೆದ ವಾದ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಗೊಂದಲದ ಗೂಡಾಗಿತ್ತು. ಶನಿವಾರ ರ‍್ಯಾವಣಕಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರಮುಖ ಸಮಸ್ಯೆಯಾಗಿ ಚರ್ಚೆಗೆ ಬಂದಿದ್ದರಿಂದ ತಹಶೀಲ್ದಾರ ಎಂ ಸಿದ್ದೇಶ್ ಖುದ್ದು ಪರಿಶೀಲಿಸಿದರು.
ಭೂಮಾಪನ ಇಲಾಖೆ, ತಾಪಂ, ಗ್ರಾಪಂ ಹಾಗೂ ಗ್ರಾಮಸ್ಥರ ಸಮಕ್ಷಮದಲ್ಲಿ ಬಾವಿ ಪಕ್ಕದಲ್ಲಿ ನಿಂತು ಸ್ಥಳ ಪರಿಶೀಲಿಸಿ ಸಮಸ್ಯೆ ಇತ್ಯಾರ್ಥಗೊಳಿಸಲಾಯಿತು. ಬಾವಿಗೆ ಪಕ್ಕದಲ್ಲಿ ನಿಲ್ಲುವ ಚರಂಡಿ ನೀರು ಹರಿವಿಗೆ ಮಾರ್ಗ ಕಲ್ಪಿಸಲಾಯಿತು. ತೆರೆದ ಬಾವಿಯ ಬಳಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಯಿತು.