ಕೊಪ್ಪಳ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಕೊಪ್ಪಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಮಹಿಳೆಯರಿಗೆ ಒದಗಿ ಬಂದಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಿದೆ. ಹೀಗಾಗಿ ಕೊಪ್ಪಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಹಳ ಕುತೂಹಲ ಮೂಡಿಸಿದೆ.
ಒಟ್ಟು 31 ಸದಸ್ಯ ಬಲದ ಕೊಪ್ಪಳ ನಗರಸಭೆಯಲ್ಲಿ 15 ಕಾಂಗ್ರೆಸ್, 10 ಬಿಜೆಪಿ, 2 ಜೆಡಿಎಸ್ ಹಾಗೂ 4 ಜನ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಈಗಾಗಲೇ ಓರ್ವ ಪಕ್ಷೇತರ ಸದಸ್ಯ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಬಿಜೆಪಿ ಸದಸ್ಯರ ಸಂಖ್ಯಾ ಬಲ 11 ಕ್ಕೆ ಏರಿಕೆಯಾಗಿದೆ. ಎರಡೂ ಕಡೆಯಲ್ಲಿ ಮೀಸಲಾತಿ ಅನುಗುಣವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅರ್ಹತೆಯ ಮಹಿಳಾ ಸದಸ್ಯರು ಇದ್ದಾರೆ.
ಇನ್ನು ಇಬ್ಬರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಗೆ ಬೆಂಬಲಿಸಲಿದ್ದಾರೆ ಎಂಬ ಮಾಹಿತಿ ಇದ್ದು, ಈಗ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.