ಗಂಗಾವತಿ: ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದು ಅಮಾನತುಗೊಂಡಿದ್ದ ಇಲ್ಲಿನ ತಹಶೀಲ್ದಾರ್ ಚಂದ್ರಕಾಂತ್ ಅವರ ಜಾಗಕ್ಕೆ ಕಂಪ್ಲಿಯ ತಹಶೀಲ್ದಾರ್ ರೇಣುಕಾ ಅವರನ್ನು ನಿಯೋಜಿಸಿ ಕಂದಾಯ ಇಲಾಖೆಯ ಕಾರ್ಯದರ್ಶಿ ನಾಗರಾಜ್.ಎಸ್ ಆದೇಶ ಹೊರಡಿಸಿದ್ದಾರೆ.
ಗಂಗಾವತಿ ತಹಶೀಲ್ದಾರ್ ಸ್ಥಾನಕ್ಕೆ ರೇಣುಕಾ ನಿಯೋಜನೆ
ಮೂರು ತಿಂಗಳ ಹಿಂದೆ ರೈತನೋರ್ವನ ಬಳಿ ಲಂಚ ಪಡೆಯುವ ವೇಳೆ ಗಂಗಾವತಿಯ ತಹಶೀಲ್ದಾರ್ ಚಂದ್ರಕಾಂತ್ ಎಂಬಾತ ಸಿಕ್ಕಿಬಿದ್ದು, ಕೆಲಸದಿಂದ ಅಮಾನತುಗೊಂಡಿದ್ದರು. ಇದೀಗ ಈ ಸ್ಥಾನಕ್ಕೆ ಕಂಪ್ಲಿ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಾ ಅವರನ್ನು ನಿಯೋಜಿಸಲಾಗಿದೆ.
ಮೂರು ತಿಂಗಳ ಹಿಂದೆ ರೈತರೊಬ್ಬರ ಜಮೀನಿನ ವಿಚಾರವಾಗಿ ದಾಖಲೆ ವಿಲೇವಾರಿ ಮಾಡಲು ಲಂಚ ಕೇಳಿದ ಆರೋಪದಡಿ ಶಿರಸ್ತೇದಾರ ಶರಣಪ್ಪ ಹಾಗೂ ತಹಶೀಲ್ದಾರ್ ಚಂದ್ರಕಾಂತ್ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ತಹಶೀಲ್ದಾರ್ ಚಂದ್ರಕಾಂತ್ ಅವರ ವಿಚಾರಣೆ ಬಾಕಿ ಇಟ್ಟು ಅಮಾನತು ಮಾಡಲಾಗಿತ್ತು. ಕಳೆದ ಮೂರು ತಿಂಗಳಿಂದ ಕಾರಟಗಿಯ ತಹಶೀಲ್ದಾರ್ ಕವಿತಾ ಅವರಿಗೆ ಗಂಗಾವತಿಯ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದ್ದು, ಇದೀಗ ರೇಣುಕಾ ಅವರನ್ನು ನಿಯೋಜಿಸಲಾಗಿದೆ.
ಗಂಗಾವತಿಗೆ ಸ್ವತಂತ್ರ ತಹಶೀಲ್ದಾರ್ ಆಗಿ ರೇಣುಕಾ ನೇಮಕಗೊಂಡಿದ್ದು, ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಳ್ಳಿಯವರಾದ ಇವರು, ಇದಕ್ಕೂ ಮೊದಲು ಕಂಪ್ಲಿ ಹಾಗೂ ಹೊಸಪೇಟೆಯಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದಾರೆ.